ಸಾರಾಂಶ
ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ
ಇಲ್ಲಿನ ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿ -26 ರ ಸಂಪರ್ಕದ ಗ್ರಾಮ ಪಂಚಾಯಿತಿ ಹಿಂಭಾಗದ ಕನ್ಸರ್‍ವೆನ್ಸಿ ರಸ್ತೆಯಲ್ಲಿ ಮೆಸ್ಕಾಂನವರು ರಸ್ತೆ ಅಗಲೀಕರಣ ಕಾಮಗಾರಿಯೊಂದಿಗೆ 11 ಕೆ.ವಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಸಂದರ್ಭದಲ್ಲಿ ನ್ಯಾಯಾಲಯದ ಅದೇಶವಿರುವ 8 ಅಡಿ ಅಗಲ 155 ಅಡಿ ಉದ್ದದ ರಸ್ತೆಯ ಮಧ್ಯದಲ್ಲಿ ಕಂಬ ಹಾಕಿರುವ ಬಗ್ಗೆ ಬಡಾವಣೆ ನಿವಾಸಿಗಳು ಶಾಸಕ ಗೋಪಾಲಕೃಷ್ಣ ಬೇಳೂರುಗೆ ಮನವಿ ಸಲ್ಲಿಸಿ ತೆರವಿಗೆ ಆಗ್ರಹಿಸಿದ ಮೇರೆಗೆ ಶಾಸಕರು ಸ್ಥಳದಿಂದಲೇ ಗುತ್ತಿಗೆದಾರನಿಗೆ ಕೂಡಲೇ ಅಳವಡಿಸಲಾದ ಕಂಬ ಕಿತ್ತು ಬೇರೆಡೆಗೆ ಹಾಕಿ ಬಡಾವಣೆಯವರಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಲು ಸೂಚಿಸಿದರು.ನಮ್ಮ ಸರ್ಕಾರ ರಾಜ್ಯದಲ್ಲಿ ಆಧಿಕಾರಕ್ಕೆ ಬರುತ್ತಿದ್ದಂತೆ ಸಾಗರ-ತೀರ್ಥಹಳ್ಳಿ ಸಂಪರ್ಕದ ರಾಜ್ಯ ಹೆದ್ದಾರಿ-26 ರಲ್ಲಿನ ವಿನಾಯಕ ವೃತ್ತದಿಂದ ಎಪಿಎಂಸಿ ಬಳಿಯ ಒಂದು ಕಿ.ಮೀ. ದ್ವಿಪಥ ರಸ್ತೆ ಕಾಮಗಾರಿಗೆ ₹485 ಕೋಟಿ ಹಣ ಬಿಡುಗಡೆಗೊಳಿಸಿದ್ದು, ಇನ್ನೊಂದು ವಾರದೊಳಗೆ ಸಾಗರ ರಸ್ತೆಯ ದ್ವಿಪಥ ರಸ್ತೆಯ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮಧ್ಯೆಯೂ ಗ್ರಾಮೀಣ ಪ್ರದೇಶದ ಹಲವು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.ವಿದ್ಯುತ್ ಲೈನ್ ಅಳವಡಿಕೆಗೆ ಅಡ್ಡಿಯಾಗದಂತೆ ಕ್ರಮ: ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯಂಚಿನ 11 ಕೆ.ವಿ.ಲೈನ್ ಕಂಬಗಳ ಸ್ಥಳಾಂತರ ಮಾಡಬೇಕಾಗಿದ್ದು ಸಾರ್ವಜನಿಕರು ಮುಲಾಜಿಲ್ಲದೆ ತಮ್ಮ ಅಂಗಡಿ ಮುಂದೆ ಜಾಗ ತೆರವುಗೊಳಿಸಿ ಸಹಕಾರ ನೀಡಲು ಸಾರ್ವಜನಿಕರು, ಅಂಗಡಿ ಮಾಲೀಕರಲ್ಲಿ ಮನವಿ ಮಾಡಿದರು. ಅದಕ್ಕೂ ಮಿಕ್ಕಿ ಅಡ್ಡಿಪಡಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುವುದೆಂದು ಎಚ್ಚರಿಕೆ ನೀಡಿದರು.
ಜೂ.3 ರಂದು ನಡೆಯುವ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಆಯನೂರು ಮಂಜುನಾಥ ಮತ್ತು ಕೆ.ಕೆ.ಮಂಜುನಾಥ ಪರವಾಗಿ ಇಲ್ಲಿನ ಸರ್ಕಾರಿ ಪದವಿ ಕಾಲೇಜಿಗೆ ಶಾಸಕ ಹಾಗೂ ರಾಜ್ಯ ಆರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಉಪನ್ಯಾಸಕರಲ್ಲಿ ಮತಯಾಚಿಸಿದರು.ಮುಖಂಡರಾದ ಬಿ.ಜೆ.ಚಂದ್ರಮೌಳಿ ಗೌಡ, ಎಚ್.ವಿ.ಈಶ್ವರಪ್ಪ ಗೌಡ, ಸುಬ್ರಹ್ಮಣ್ಯ ಸಂಪೆಕಟ್ಟೆ, ಧನಲಕ್ಷ್ಮಿ, ಕೆರೆಹಳ್ಳಿ ರವೀಂದ್ರ, ಶ್ರೀಧರ, ರಮೇಶ್, ರಾಜುಗೌಡ, ನವೀನ ಕೆರೆಹಳ್ಳಿ, ಶ್ರೀನಿವಾಸ ಆಚಾರ್, ಸೈಲಾ ಪ್ರಭು, ಚಾಮುಂಡಮ್ಮ, ಸಾವಿತ್ರಿ, ಗುರುರಾಜ್ ಇನ್ನಿತರರಿದ್ದರು.