ಸಾರಾಂಶ
ಕಂದಾಯ ನಿರೀಕ್ಷಕ ಎಂ.ಮಂಜುನಾಥ ಮಾತನಾಡಿ, ಈಗಾಗಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದ್ದು, ಜಮೀನು ಮಂಜೂರಿಗಾಗಿ ಸಲ್ಲಿಸಿರುವ ನಮೂನೆ- 57ಅನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಕನ್ನಡಪ್ರಭ ವಾರ್ತೆ ತುಮಕೂರು
ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡವರಿಗೆ ಶೀಘ್ರವೇ ಒತ್ತುವರಿ ತೆರವಿಗಾಗಿ ನೋಟಿಸ್ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಹಸೀಲ್ದಾರ್ ರಾಜೇಶ್ವರಿಗೆ ಸೂಚನೆ ನೀಡಿದರು.ತಾಲೂಕಿನ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಗ್ರಾಮದ ಸ.ನಂ. 82ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಬಗ್ಗೆ ಶಾಸಕರು ನೀಡಿದ ದೂರಿನ ಮೇರೆಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಕೂಡಲೇ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಕಂದಾಯ ನಿರೀಕ್ಷಕ ಎಂ.ಮಂಜುನಾಥ ಮಾತನಾಡಿ, ಈಗಾಗಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದ್ದು, ಜಮೀನು ಮಂಜೂರಿಗಾಗಿ ಸಲ್ಲಿಸಿರುವ ನಮೂನೆ- 57ಅನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ನಂತರ ಸ.ನಂ. 156 ರ ಹೆಬ್ಬೂರು ಅಮಾನಿಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಸುಮಾರು 420 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಕೆರೆಯ ಮಣ್ಣನ್ನು ಅಕ್ರಮವಾಗಿ ತೋಟ, ಇಟ್ಟಿಗೆ ಕಾರ್ಖಾನೆಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳು ಬಂದಿವೆ. ಅಕ್ರಮವಾಗಿ ಕೆರೆಯ ಮಣ್ಣನ್ನು ಸಾಗಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು. ಈ ಕೆರೆಯಲ್ಲಿಯೂ ಉಳುಮೆ ಮಾಡಲು ಒತ್ತುವರಿ ಮಾಡಿಕೊಂಡಿರುವುದು ಗಮನಿಸಿದ ಅವರು ಕೆರೆಯ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಉಪತಹಸೀಲ್ದಾರ್ ಭೂಮೇಶ್ ನಾಯ್ಕ್, ಗ್ರಾಮ ಆಡಳಿತಾಧಿಕಾರಿ ಸವಿತ, ತೇಜಸ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.