ಸಾರಾಂಶ
ಕನ್ನಡಭ ವಾರ್ತೆ ಗೌರಿಬಿದನೂರು
ನಗರದ ವಿವಿಧೆಡೆಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.ಯಾವುದೇ ಸೂಚನೆ ಇಲ್ಲದೆ ನಗರಸಭೆ ನಾಮಪಲಕಗಳನ್ನು ತೆರವುಗೊಳಿಸಲಾಗುತ್ತಿದೆ. ಎಂದು ಮಳಿಗೆಗಳ ಮಾಲೀಕರು ದೂರಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳುತ್ತಿರುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದರು.
ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಬಳಸುವಂತೆ ವಾಣಿಜ್ಯ ಮಳಿಗೆಗಳ ಮಾಲಿಕರಿಗೆ ಸೂಚನೆ ನೀಡಲಾಗುತ್ತು. ಆದರೂ ಕನ್ನಡಕ್ಕೆ ಆದ್ಯತೆ ನೀಡಿರಲಿಲ್ಲ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು. ಈ ಬಗ್ಗೆ ತಾಲೂಕು ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ವರ್ತಕರಿಗೆ ಕಾಲಾವಕಾಶವನು ನೀಡಲಾಗಿತ್ತು. ಕಳೆದ ೧೦ ದಿನಗಳ ಹಿಂದೆಯೇ ಅಂಗಡಿ ಮಾಲಿಕರಿಗೆ 2 ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಮಳಿಗೆಗಳ ಮಾಲೀಕರು ನಾಮಫಲಕ ಬದಲಾವಣೆ ಮಾಡಿರಲಿಲ್ಲ.ಕಸಾಪದ ನಂಜುಂಡಪ್ಪ ಮಾತನಾಡಿ ಶೇ.60ರಷ್ಟು ಕನ್ನಡದಲ್ಲಿ ಮತ್ತು ಉಳಿದ ಶೇ.40ರ ಅನುಪಾತದಲ್ಲಿ ಅನ್ಯಭಾಷೆಗಳಲ್ಲಿ ನಾಮಫಲಕ ಅಳವಡಿಸಲು ನಿಯಮವಿದೆ. ಕನ್ನಡ ನೆಲದ ಅನ್ನ, ನೀರು ಸೇವಿಸುತ್ತಾ ತಾಯ್ನಾಡಿಗೆ ಅಗೌರವ ತೋರುವವರ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೆ ಅನ್ಯ ಭಾಷಿಗರ ಕಪಿಮುಷ್ಠಿಗೆ ಸಿಲುಕಿ ಕನ್ನಡ ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ವೇತಾಬೇಕರಿ ಮಾಲೀಕ ರಾಮಲಿಂಗಾರಡ್ಡಿ ಮಾತನಾಡಿ, ಇದುವರೆಗೂ ನಮಗೆ ಎಂದು ನೋಟಿಸ್ ಸಹ ನೀಡಿಲ್ಲ, ಯಾವುದೇ ರೀತಿಯ ಮಾಹಿತಿ ನೀಡದೆ ಬೆಳ್ಳಂಬೆಳಗ್ಗೆ ಬಂದು ನಾಮಫಲಕಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಹಿರಿಯ ಆರೋಗ್ಯ ನಿರೀಕ್ಷಕ-ನವೀನ.ಆರ್ ಮಾತನಾಡಿ ತಹಸೀಲ್ದಾರರು, ಆಯುಕ್ತರು, ನಗರಸಭೆ-ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಚೇರಿಯ ಸಿಬ್ಬಂದಿ ನಗರಸಭೆ ಅಧಿಕಾರಿಗಳು ಅನೇಕ ಬಾರಿ ಹೇಳಿದರೂ ವರ್ತಕರು ನಾಮಫಲಕಗಳನ್ನು ತೆರವುಗೊಳಿಸಿಲ್ಲ, ಆದ ಕಾರಣ ನಾವುಇಂದು ಆಂಗ್ಲಭಾಷೆ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದರು. ಹಿರಿಯ ಆರೋಗ್ಯನಿರೀಕ್ಷಕ ನವೀನ್ ಸೇರಿದಂತೆ ನಗರಸಭೆ ಸಿಬ್ಬಂದಿ ಇದ್ದರು.