ಕೆ.ಆರ್.ಪೇಟೆ ಪಟ್ಟಣದ ಎಲ್.ಕೆ.ಜಿ ಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ ಸೇರಿದಂತೆ ಹಲವು ವಿಷಯಗಳ ಕಲಿಕೆಗಾಗಿ ವಿದ್ಯಾಸಂಸ್ಥೆಗಳಿಗೆ ನಿತ್ಯ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವರ್ತಕರು ಅತಿಕ್ರಮಿಸಿಕೊಂಡಿರುವ ಫುಟ್‌ಪಾತ್ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಸುರೇಶ್ ಕುಮಾರ್ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಮಿತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ, ಪಟ್ಟಣದ ಎಲ್.ಕೆ.ಜಿ ಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ ಸೇರಿದಂತೆ ಹಲವು ವಿಷಯಗಳ ಕಲಿಕೆಗಾಗಿ ವಿದ್ಯಾಸಂಸ್ಥೆಗಳಿಗೆ ನಿತ್ಯ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ ಎಂದರು.
ಜೊತೆಗೆ ತಾಲೂಕಿನ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಜನ ಪಟ್ಟಣಕ್ಕೆ ಬರುತ್ತಾರೆ. ಆದರೆ, ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳನ್ನು ಫುಟ್ ಪಾತ್ ವ್ಯಾಪಾರಿಗಳು ಆವರಿಸಿಕೊಂಡಿದ್ದು ಪಾದಚಾರಿಗಳು ನಡುರಸ್ತೆಯಲ್ಲಿಯೇ ಸಂಚರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಹೊಸಹೊಳಲು ರಸ್ತೆ ಸಾರ್ವಜನಿಕ ಆಸ್ಪತ್ರೆಯಿಂದ ಹಿಡಿದು ಬಿಜಿಎಸ್ ಶಿಕ್ಷಣ ಸಂಸ್ಥೆವರೆಗೆ ಮತ್ತು ಮೈಸೂರು ರಸ್ತೆಯ ಎಪಿಎಂಸಿಯಿಂದ ಹೆಚ್.ಎಲ್.ಬಿ.ಸಿ ವರೆಗೆ ಮುಖ್ಯ ರಸ್ತೆ ಎರಡೂ ಬದಿಗಳು ಫುಟ್ ಪಾತ್ ವ್ಯಾಪಾರಿಗಳು ಮತ್ತಿತರರಿಂದ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ದೂರಿದರು.
ಕೆಲವರು ಫುಟ್ ಪಾತ್ ಗಳಲ್ಲಿ ಕಾಯಂ ಅಂಗಡಿಗಳನ್ನು ಇಟ್ಟುಕಂಡಿದ್ದಾರೆ. ಇದರಿಂದ ಜನರ ಮುಕ್ತ ಸಂಚಾರಕ್ಕೆ ಅವಕಾಶವೇ ಇಲ್ಲದಂತಾಗಿದೆ. ಅತಿಕ್ರಮದಿಂದ ಜನರು ರಸ್ತೆಯಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಜೊತೆಗೆ ಸಂಚರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಜನ ಜೀವ ಭಯದಲ್ಲಿ ಸಂಚರಿಸುತ್ತಿದ್ದರೂ ಫುಟ್ ಪಾತ್ ತೆರವು ಮಾಡಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಲು ತಾಲೂಕು ಆಡಳಿತ, ಪುರಸಭೆ ಅಥವಾ ಪೊಲೀಸ್ ಇಲಾಖೆ ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ವಹಿಸಿ ಫುಟ್ ಪಾತ್ ತೆರವುಗೊಳಿಸಿ ನಾಗರೀಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.ಈ ವೇಳೆ ಸಮಿತಿ ಉಪಾಧ್ಯಕ್ಷ ಮಿಲಿಟರಿ ಸುಕುಮಾರ್, ಪ್ರಧಾನ ಕಾರ್ಯದರ್ಶಿ ಚಾ.ಶಿ.ಜಯಕುಮಾರ್, ಸಹಕಾರ್ಯದರ್ಶಿ ಚಂದ್ರಕಲಾ, ನಿರ್ದೇಶಕ ಎಲ್.ಬಿ.ಜವರೇಗೌಡ, ನವಿಲುಮಾರನಹಳ್ಳಿ ರಾಮೇಗೌಡ ಸೇರಿದಂತೆ ಹಲವರಿದ್ದರು.