ಡಾ.ಗುರುವಪ್ಪ ವೃತ್ತದಲ್ಲಿ ಡಿವೈಡರ್ ತೆರವುಗೊಳಿಸಿ

| Published : Sep 28 2024, 01:26 AM IST

ಡಾ.ಗುರುವಪ್ಪ ವೃತ್ತದಲ್ಲಿ ಡಿವೈಡರ್ ತೆರವುಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ನಗರದ ಡಾ.ಗುರುವಪ್ಪ ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಡಿವೈಡರ್ ಅನ್ನು ತೆರುವ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಚನ್ನಪಟ್ಟಣ: ನಗರದ ಡಾ.ಗುರುವಪ್ಪ ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಡಿವೈಡರ್ ಅನ್ನು ತೆರುವ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಜಮಾಯಿಸಿದ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ, ಬೆಂ-ಮೈ ಹೆದ್ದಾರಿಯಲ್ಲಿ ಡಾ.ಗುರುವಪ್ಪ ವೃತ್ತದಲ್ಲಿರುವ ಡಿವೈಡರ್‌ನಿಂದ ವಾಹನ ಸವಾರರು ಸುತ್ತುಬಳಸಿಕೊಂಡು ಸಂಚರಿಸುವಂತಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿವೈಡರ್ ಎತ್ತರವನ್ನು ಇನ್ನು ಎರಡು ಅಡಿ ಎತ್ತರಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಡಿವೈಡರ್ ಎತ್ತರಿಸುವ ನಿರ್ಧಾರ ಬಿಡಬೇಕು. ಈ ರಸ್ತೆಯಲ್ಲಿನ ಡಿವೈಡರ್ ಅನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ವಾಹನಗಳ ದಟ್ಟನೆ ಇದ್ದ ಕಾರಣ ಇಲ್ಲಿದ್ದ ಯೂಟರ್ನ್ ಮುಚ್ಚಿ ಡಿವೈಡರ್ ಅನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಬೆಂ-ಮೈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ನಂತರ ಈ ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ಡಿವೈಡರ್ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ನಗರದ ಚರ್ಚ್ ರಸ್ತೆಯಿಂದ ಅಂಚೆಕಚೇರಿ ರಸ್ತೆ, ಪೇಟೆ, ಸರ್ಕಾರಿ ಬಾಲಕಿಯರು ಕಾಲೇಜು, ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಮಂದಿ ಈ ವೃತ್ತದ ಮೂಲಕ ಓಡಾಡುತ್ತಾರೆ. ಡಿವೈಡರ್ ಎತ್ತರ ಹೆಚ್ಚಿಸಿದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಪ್ರತಿನಿತ್ಯ ಒಂದು ಕಿ.ಮಿ.ಗೂ ಹೆಚ್ಚು ಸುತ್ತುಬಳಸಿಕೊಂಡು ಓಡಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಡಿವೈಡರ್ ತೆರವು ಮಾಡಿ ಇಲ್ಲವೇ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಗರಸಭಾ ಮಾಜಿ ಸದಸ್ಯ ಜೆಸಿಬಿ ಲೋಕೇಶ್ ಮಾತನಾಡಿ, ಡಾ.ಗುರುವಪ್ಪ ವೃತ್ತದ ಮೂಲಕ ಚರ್ಚ್ ರಸ್ತೆ ಮಾರ್ಗದಲ್ಲಿನ ೨೫ಕ್ಕೂ ಹೆಚ್ಚು ಹಳ್ಳಿಗಳ ಜನರು ಈ ರಸ್ತೆಯ ಮೂಲಕ ಸಂಚರಿಸುತ್ತಾರೆ. ಇದೀಗ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಿ ಸಾರ್ವಜನಿಕರು ಬಳಸಿಕೊಂಡು ಓಡಾಡುವಂತೆ ಮಾಡಲು ಮುಂದಾಗಿರುವ ಪ್ರಾಧಿಕಾರದ ನಿರ್ಣಯ ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡರು (ಎನ್‌ಜಿ) ಡಾ.ಲೋಕಾನಂದ್, ಸಮಾಜ ಸೇವಕ ರಾಂಪುರ ರಾಜಣ್ಣ, ಕಸಬಾ ಪಿಎಸಿಎಸ್ ನಿರ್ದೇಶಕ ಚೇತನ್ ಕೀಕರ್, ನಗರಸಭಾ ನಾಮಿನಿ ಸದಸ್ಯ ಮಂಗಳವಾರಪೇಟೆ ತಿಮ್ಮರಾಜು(ಎಂಟಿಆರ್), ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು), ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಇತರರು ಇದ್ದರು.

ಡಿವೈಡರ್ ಎತ್ತರಿಸದಂತೆ ಸೂಚನೆ

ಕಕಜವೇ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಮಹೇಂದ್ರ, ಹಾಗೂ ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೋರಾಟದ ಉದ್ದೇಶವನ್ನು ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸದ್ಯಕ್ಕೆ ಡಿವೈಡರ್ ಅನ್ನು ಎತ್ತರಿಸುವುದಿಲ್ಲ. ಡಿವೈಡರ್ ತೆರವು ಮಾಡುವ ಹಾಗೂ ಯೂಟರ್ನ್ ನಿರ್ಮಾಣ ಮಾಡುವ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.