ಒತ್ತುವರಿ ತೆರವುಗೊಳಿಸಿ ಹಳ್ಳಿಸಂತೆ ಮಾರುಕಟ್ಟೆ ನಿರ್ಮಿಸಲಿ

| Published : Dec 13 2024, 12:47 AM IST

ಸಾರಾಂಶ

ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ವೆ ನಂಬರ್ ೧೩ರಲ್ಲಿರುವ ೩೦ ಗುಂಟೆ ಸಂತೆ ಮೈದಾನದ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ನಂತರ ಹಳ್ಳಿಸಂತೆ ಮಾರುಕಟ್ಟೆ ನಿರ್ಮಾಣ ಮಾಡಬೇಕು ಹಾಗೂ ಒತ್ತುವರಿ ಮಾಡಿರುವವರಿಗೆ ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗಟ್ಟಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜು ಅರೇಹಳ್ಳಿ ಆಗ್ರಹಿಸಿದರು. ಅರೇಹಳ್ಳಿಯಲ್ಲಿ ಮೂರು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಮುಂದಿನ ದಿನಗಳಲ್ಲಿ ಹಳ್ಳಿ ಸಂತೆ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿಯೇ ಅಹೋರಾತ್ರಿ ಧರಣಿ ಮಾಡುವ ಕುರಿತು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ವೆ ನಂಬರ್ ೧೩ರಲ್ಲಿರುವ ೩೦ ಗುಂಟೆ ಸಂತೆ ಮೈದಾನದ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸಿ ನಂತರ ಹಳ್ಳಿಸಂತೆ ಮಾರುಕಟ್ಟೆ ನಿರ್ಮಾಣ ಮಾಡಬೇಕು ಹಾಗೂ ಒತ್ತುವರಿ ಮಾಡಿರುವವರಿಗೆ ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗಟ್ಟಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜು ಅರೇಹಳ್ಳಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ವೆ ನಂಬರ್‌ ೧೩ರಲ್ಲಿ ೩೬ ಗುಂಟೆ ಜಾಗದಲ್ಲಿ ಸಂತೆ ಮೈದಾನಕ್ಕೆ ಮೀಸಲಿರಿಸಿದ್ದು, ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳಾದ ಸುಂದರ್ ರೈ ತಂದೆ ತುಕ್ರಪ್ಪ ರೈ, ಹಪ್ಪಿ ಕೋಂ ಸುಂದರ್ ರೈ ಇವರ ಮಗಳಾದ ಅರೇಹಳ್ಳಿ ಗ್ರಾ.ಪಂನಲ್ಲಿ ಬಿಲ್ ಕಲೆಕ್ಟರ್ ರೂಪ ಎಂಬುವವರು ಪಂಚಾಯಿತಿಯಲ್ಲಿ ಇದ್ದುಕೊಂಡೇ ಸರ್ಕಾರಿ ಬೋರ್‌ವೆಲ್ ಕೊಳವೆ ಬಾವಿ ಮುಚ್ಚಿ ಕೋಳಿ ಅಂಗಡಿ ತೆರೆದು ಪರವಾನಗಿ ಪಡೆದು, ಸುಮಾರು ಕೋಟ್ಯಂತರ ರು. ಬೆಲೆಬಾಳು ೧೦ ಗುಂಟೆ ಜಾಗವನ್ನು ಒತ್ತುವರಿ ಮಾಡಿರುತ್ತಾರೆ. ಇವರಿಗೆ ಸಂಬಂಧಿಗಳು ಅರೇಹಳ್ಳಿ ಗ್ರಾ.ಪಂ ಸದಸ್ಯರಾಗಿದ್ದು, ಒತ್ತುವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿ, ಪ್ರತಿಭಟನೆ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದೇ ಸರ್ವೆ ನಂಬರ್ ೧೩ರಲ್ಲಿ ಜ್ಯೋತಿ ಮೋಹನ್, ಕರೀಂ ಸಾಬ್, ಇನ್ನಿತರರು ಸಂತೆ ಜಾಗವನ್ನು ಒತ್ತುವರಿ ಮಾಡಿರುವುದು ಸರ್ವೇ ಮೂಲಕ ಸಾಬೀತಾಗಿರುತ್ತದೆ. ಪ್ರಗತಿಪರ ಸಂಘಟನೆಗಳು ಈ ಕುರಿತು ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರು. ಶಾಸಕರ ಗಮನಕ್ಕೆ ಮೂರು ಬಾರಿ ಸಭೆಯಲ್ಲಿ ತಂದಿದ್ದರೂ ಸಹ ಒತ್ತುವರಿ ತೆರವುಗೊಳಿಸದೆ ಒತ್ತುವರಿದಾರರಿಗೆ ಅನುಕೂಲವಾಗಲೆಂದು ಅರೇಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಶಾಸಕರ ಹೆಸರು ಬಳಸಿಕೊಂಡು ರಸ್ತೆ ಬದಿ ಇರುವ ೬ ಗುಂಟೆ ಜಾಗದಲ್ಲಿ ಹಳ್ಳಿ ಸಂತೆ ನಿರ್ಮಿಸಲು ಮುಂದಾಗಿರುವುದು ಖಂಡನೀಯ. ಈ ಒತ್ತುವರಿದಾರರಿಗೆ ಶಾಸಕರು ಬೆಂಬಲ ನೀಡಿದರೆ ಶಾಸಕರ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಈ ಹಳ್ಳಿ ಸಂತೆ ಕಟ್ಟಡ ನಿರ್ಮಿಸುತ್ತಿರುವ ಸ್ಥಳವನ್ನು ಬದಲಾಯಿಸಿ ಒತ್ತುವರಿ ತೆರವುಗೊಳಿಸುವ ಜಾಗದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂತೆ ಮೈದಾನ ವಿಶಾಲಗೊಳ್ಳುವ ಉದ್ದೇಶದಿಂದ ಕಟ್ಟಡವನ್ನು ಇದೇ ಸ.ನಂ ೧೩ ರ ಒತ್ತುವರಿ ಜಾಗದಲ್ಲಿ ನಿರ್ಮಾಣ ಮಾಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯವಾಗಿದೆ ಎಂದು ಹೇಳಿದರು.

ಈಗಾಗಲೇ ಮೇಲಾಧಿಕಾರಿಗಳಿಗೆ ದಾಖಲಾತಿಗಳ ಸಮೇತ ದೂರು ನೀಡಲಾಗಿದೆ, ಹೋರಾಟ ಮಾಡಲಾಗಿದೆ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೂ ಸಹ ಅಧಿಕಾರಿಗಳು ಗ್ರಾ.ಪಂ ಸದಸ್ಯರ ಕುಮ್ಮಕ್ಕಿನಿಂದ ಸರ್ಕಾರಿ ಸೇವೆಯಲ್ಲಿ ಇರುವವರೇ ಸರ್ಕಾರಿ ಆಸ್ತಿ ಕಾಪಾಡುವುದನ್ನು ಬಿಟ್ಟು ಒತ್ತುವರಿದಾರರ ಬೆಂಬಲಕ್ಕೆ ನಿಂತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ವಿಚಾರವಾಗಿ ಲೋಕಯುಕ್ತಕ್ಕೂ ದೂರು ನೀಡಲಾಗಿದೆ. ಜಿಲ್ಲಾ ಪಂಚಾಯಿತಿಗೂ ಮನವಿ ಮಾಡಲಾಗಿದೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ ಎಂದರು. ಅರೇಹಳ್ಳಿಯಲ್ಲಿ ಮೂರು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಮುಂದಿನ ದಿನಗಳಲ್ಲಿ ಹಳ್ಳಿ ಸಂತೆ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿಯೇ ಅಹೋರಾತ್ರಿ ಧರಣಿ ಮಾಡುವ ಕುರಿತು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಈಗಾಗಲೇ ಈ ವಿವಾದ ಕುರಿತಂತೆ ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಹೋರಾಟಗಾರರಿಗೆ ಬೆದರಿಕೆ ಹಾಕುತ್ತ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಸದಸ್ಯರು ಹೇಳುವ ಬೆದರಿಕೆಗೆ ನಾವು ಎದರುವುದಿಲ್ಲ. ಕಾನೂನಾತ್ಮಕ ಹೋರಾಟ ನಮ್ಮದಾಗಿರುತ್ತದೆ. ಅರೇಹಳ್ಳಿಯ ಸಾರ್ವಜನಿಕರು ಗ್ರಾ.ಪಂ ನೀಡುವ ಸುಳ್ಳು ಮಾಹಿತಿಗೆ ಕಿವಿಕೊಡದೆ ಸಂತೆ ಜಾಗ ಉಳಿವಿಗೆ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು. ನಮ್ಮೂರಿನ ಸಂತೆ ಉಳಿಸಿಕೊಳ್ಳೋಣ. ಒತ್ತುವರಿ ಭೂ ಕಬಳಿಕೆದಾರರಿಗೆ ಹಾಗೂ ತಪ್ಪಿಸ್ಥ ಅಧಿಕಾರಿಗಳನ್ನು ಜೈಲಿಗಟ್ಟೋಣ ಎಂಬ ಕೂಗಿನೊಂದಿಗೆ ನಮ್ಮ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಸಿದ್ದರಾಜು, ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ಸಿಜೆಎಂ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ದಿನೇಶ್ ಉಪಸ್ಥಿತರಿದ್ದರು.