ಮಳೆಗೂ ಮುನ್ನ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಿ

| Published : May 03 2024, 01:04 AM IST

ಸಾರಾಂಶ

ಮುಂಗಾರು ಮಳೆ ಬೀಳುವುದಕ್ಕೂ ಮುನ್ನ ತಾಲೂಕು ಆಡಳಿತ ಎಚ್ಚೆತ್ತು ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಕಾಗೇಹಳ್ಳ ತೆರವುಗೊಳಿಸದಿದ್ದಲ್ಲಿ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲೋದು ಗ್ಯಾರಂಟಿ!

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂಗಾರು ಮಳೆ ಬೀಳುವುದಕ್ಕೂ ಮುನ್ನ ತಾಲೂಕು ಆಡಳಿತ ಎಚ್ಚೆತ್ತು ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಕಾಗೇಹಳ್ಳ ತೆರವುಗೊಳಿಸದಿದ್ದಲ್ಲಿ ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲೋದು ಗ್ಯಾರಂಟಿ!ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ಚಿಕ್ಕ ಕೆರೆಯಂತಾಗಲಿದ್ದು, ನಿಂತ ಮಳೆಯ ನೀರಿಗೆ ಪಾದಚಾರಿಗಳು, ಬೈಕ್‌, ಸೈಕಲ್‌, ಆಟೋಗಳ ಸಂಚಾರಕ್ಕೆ ಅಸ್ತವ್ಯಸ್ತ ಉಂಟಾಗಲಿದೆ. ಕನ್ನಡಪ್ರಭ ಪತ್ರಿಕೆಯು 2023ರ ಮೇ 20 ರಂದು ಮಡಹಳ್ಳಿ ಸರ್ಕಲ್‌ನ ಮಳೆ ನೀರಿನ ಸಮಸ್ಯೆಗೆ ಮುಕ್ತಿ ಯಾವಾಗ? ಎಂದು ವರದಿ ಪ್ರಕಟಿಸಿತ್ತು.

ಕನ್ನಡಪ್ರಭದ ವರದಿ ಬಳಿಕ ಎಚ್ಚೆತ್ತ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಗೇಹಳ್ಳ ಒತ್ತುವರಿ ತೆರವಿನ ಜೊತೆಗೆ ಕಾಗೇಹಳ್ಳಕ್ಕೆ 80 ಲಕ್ಷ ವೆಚ್ಚದಲ್ಲಿ ಡೆಕ್‌ ಸ್ಲ್ಯಾಬ್‌ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಬಿಡಿಸಿ ಕಾಮಗಾರಿಗೂ ಚಾಲನೆ ಕೊಡಿಸಿದ್ದರು. ಬಳಿಕ 2023 ರ ಆ.23 ರಂದು ಕನ್ನಡಪ್ರಭ ಪತ್ರಿಕೆ ಕಾಮಗಾರಿ ಪೂರ್ಣ, ಒತ್ತುವರಿ ತೆರವು ಯಾವಾಗ? ಎಂದು ವರದಿಗೆ ಎಚ್ಚೆತ್ತ ತಹಸೀಲ್ದಾರ್‌ ರಮೇಶ್‌ ಬಾಬು ಕೂಡಲೇ ಒತ್ತುವರಿ ತೆರವುಗೊಳಿಸಿ ಎಂದು ಪೊಲೀಸರಿಗೆ ನೋಟೀಸ್‌ ಕೂಡ ನೀಡಿದ್ದಾರೆ.

ಕಾಗೇಹಳ್ಳಕ್ಕೆ (ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಜಾಗದ ತನಕ) ಕಾಂಕ್ರೀಟ್‌ ಡೆಕ್‌ ಸ್ಲ್ಯಾಬ್‌ ಕಾಮಗಾರಿ ಮುಗಿದಿದೆ. ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಜಾಗ ಬಿಡದ ಕಾರಣ ಒತ್ತುವರಿ ಇನ್ನೂ ತೆರವಾಗಿಲ್ಲ.

ಪೊಲೀಸರೇ ಕಾರಣ?:

ಕಾಗೇಹಳ್ಳಕ್ಕೆ ಡೆಕ್‌ ಸ್ಲ್ಯಾಬ್‌ ಕಾಮಗಾರಿಯ ಮುಂದೆ ಪೊಲೀಸರು ಕಾಗೇಹಳ್ಳ ಒತ್ತುವರಿ ಮಾಡಿಕೊಂಡು ವಾಹನಗಳನ್ನು ನಿಲ್ಲಿಸಲು ಕಾಗೇಹಳ್ಳಕ್ಕೆ ಮಣ್ಣು ತುಂಬಿಸಿದ್ದಾರೆ. ಕಾಗೇಹಳ್ಳ ಮುಚ್ಚಿದ್ದೇ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲಲು ಸ್ಥಳೀಯ ಪೊಲೀಸರೇ ಕಾರಣರಾಗಿದ್ದಾರೆ.

ಬೇಗ ತೆರವುಗೊಳಿಸಲಿ:

ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಮುಚ್ಚಿರುವ ಕಾಗೇಹಳ್ಳ ತೆರವುಗೊಳಿಸಿ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆಯ ನೀರು ನಿಲ್ಲದಂತೆ ತಾಲೂಕು ಆಡಳಿತ ಬೇಗ ಕ್ರಮ ತೆಗೆದುಕೊಳ್ಳಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್) ಒತ್ತಾಯಿಸಿದ್ದಾರೆ.

ಮುಂಗಾರು ಮಳೆ ತಾಲೂಕಿನ ಹಲವು ಕಡೆ ಬಿದ್ದಿದೆ. ಗುಂಡ್ಲುಪೇಟೆ ಪಟ್ಟಣಕ್ಕೆ ಬುಧವಾರ ಸಂಜೆಯು ತುಂತುರು ಮಳೆ ಆಗಿದೆ. ಜೋರಾಗಿ ಮಳೆ ಬಂದರೆ ಮಡಹಳ್ಳಿ ಸರ್ಕಲ್‌ ಖಂಡಿತ ಚಿಕ್ಕ ಕೆರೆಯಂತಾಗುವ ಮುನ್ನ ತಾಲೂಕು ಆಡಳಿತ ಎಚ್ಚೆತ್ತು ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಕಾಗೇಹಳ್ಳ ತೆರವುಗೊಳಿಸಿ ಜನರು, ಬೈಕ್‌, ಸೈಕಲ್‌ ಸವಾರರು ನೆಮ್ಮದಿಯಾಗಿ ಸಂಚರಿಸಲು ಅನುವು ಮಾಡಿಕೊಡಲಿ ಎಂಬುದು ಕನ್ನಡಪ್ರಭದ ಕಳಕಳಿ.

ಕಾಳಜಿಯೇ ಇಲ್ಲ!:

ಕಾಗೇಹಳ್ಳ ಒತ್ತುವರಿಯಿಂದ ಮಳೆ ಬಂದಾಗ ಕಾಗೇಹಳ್ಳ ಮುಚ್ಚಿರುವ ಕಾರಣ ಪೊಲೀಸ್‌ ಠಾಣೆಯ ಒಳಗಿನಿಂದ ಮಡಹಳ್ಳಿ ರಸ್ತೆಯ ಮೂಲಕ ಬಂದ ಮಳೆ ನೀರು ಮಡಹಳ್ಳಿ ಸರ್ಕಲ್‌ನಲ್ಲಿ ಬಂದು ನಿಲ್ಲುತ್ತದೆ ಎಂದು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ ಮೇಲೆ ಕಾಗೇಹಳ್ಳಕ್ಕೆ ಡೆಕ್‌ ಸ್ಲ್ಯಾಬ್‌ ಕಾಮಗಾರಿ ಮುಗಿದ ೮ ತಿಂಗಳು ಉರುಳಿದರೂ ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಲು ತಾಲೂಕು ಆಡಳಿತಕ್ಕೆ ಕಾಳಜಿಯೇ ಇಲ್ಲವಾಗಿದೆ.!