ಸಾರಾಂಶ
ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವ ಪರಿಣಾಮ ಪಾದಚಾರಿಗಳ ಸಂಚಾರಕ್ಕೆ ದಾರಿ ಇಲ್ಲದಂತಾಗಿದೆ. ನಗರಸಭೆ, ಸಂಚಾರಿ ಪೋಲಿಸರು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ನಗರಸಭೆ ಆವರಣದಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಲಿ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಪ್ರಮುಖ ಬೀದಿಗಳ ಪಾದಚಾರಿ ಮಾರ್ಗದ ಮೇಲೆ ವ್ಯಾಪಾರಸ್ಥರು ಅಂಗಡಿಗಳನ್ನು ಇಟ್ಟುಕೊಂಡಿರುವುದು ಜನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕನ್ನಡ ಸೇನೆಯ ನಿಯೋಗ ನಗರದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರಿಗೆ ಮನವಿ ಪತ್ರ ನೀಡಿ ಆಗ್ರಹಿಸಿದರು.
ಪಾದಚಾರಿಗಳಿಗೆ ದಾರಿ ಇಲ್ಲಈ ವೇಳೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮಗುಡಿ ತಾಲೂಕು ಕಚೇರಿ, ಕೋರ್ಟ್ ಗಳಿಗೆ ತೆರಳುವ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಆಗಮಿಸುತ್ತಾರೆ. ಈ ರಸ್ತೆಯ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವ ಪರಿಣಾಮ ಪಾದಚಾರಿಗಳ ಸಂಚಾರಕ್ಕೆ ದಾರಿ ಇಲ್ಲದಂತಾಗಿದೆ. ನಗರಸಭೆ, ಸಂಚಾರಿ ಪೋಲಿಸರು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದೇ ರೀತಿ ನಗರದ ನಗರಸಭೆ ಆವರಣದಲ್ಲಿನ ಶೌಚಾಲಯವನ್ನು ಇತ್ತೀಚೆಗೆ ಮುಚ್ಚಲಾಗಿದೆ. ಇದು ಬಳಕೆಗೆ ಬರುವ ಅವಧಿಯಲ್ಲಿ ಕೂಡ ಸ್ವಚ್ಛತೆಯಿಲ್ಲದೆ, ಸರಿಯಾದ ನೀರಿನ ಸಂಪರ್ಕವಿಲ್ಲದೆ ಗಬ್ಬು ನಾರುತ್ತಿತ್ತು. ನಗರಾಡಳಿತ, ನಗರ ಸಭೆ ಆಯುಕ್ತರು ಇತ್ತ ಗಮನ ಹರಿಸುತ್ತಿಲ್ಲ. ನಗರಸಭೆ ಆವರಣದಲ್ಲಿಯೇ ಈ ಸ್ಥಿತಿಯಾದರೆ ಉಳಿದೆಡೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ನಿಯೋಗದಲ್ಲಿ ಕನ್ನಡ ಸೇನೆಯ ನಗರ ಅಧ್ಯಕ್ಷ ಪಿ.ವಿಜಯ್ ಕುಮಾರ್. ಉಪಾಧ್ಯಕ್ಷ ಟಿ.ಎಸ್.ವಿಜಯ್ ಕುಮಾರ್,ವಿಧ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಶ್ರೇಯಸ್, ಉಪಾಧ್ಯಕ್ಷ ತೇಜಸ್ ಇದ್ದರು.