ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹು-ಧಾ ಅವಳಿ ನಗರದಲ್ಲಿ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಭೂಗತ ಕೇಬಲ್ ಅಳವಡಿಕೆ ಹಾಗೂ ವಿದ್ಯುತ್ ಕಂಬಕ್ಕೆ ಕೇಬಲ್‌ಗಳನ್ನು ಕಟ್ಟಲಾಗಿದೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದ್ದು, ಕೂಡಲೇ ಪರವಾನಗಿ ಪಡೆಯದೆ ಅಳವಡಿಸಲಾದ ಎಲ್ಲ ಕೇಬಲ್‌ಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದರು.ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರಿಂದ ಕೇಳಿಬಂದ ಒಕ್ಕೋರಲ ಒತ್ತಾಯವಿದು.
ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ವಿವಿಧ ಟೆಲಿಕಾಂ ಸಂಸ್ಥೆಗಳು ಪಾಲಿಕೆಯಿಂದ ಪರವಾನಗಿ ಪಡೆಯದೇ ರಾಜಾರೋಷವಾಗಿ ಎಲ್ಲೆಡೆ ಭೂಗತ ಕೇಬಲ್ ಅಳವಡಿಸುವ ಕೆಲಸ ಮಾಡಿವೆ. ಇದರಿಂದ ಪಾಲಿಕೆಗೆ ಬರಬೇಕಾದ ತೆರಿಗೆ ಸಹ ಸಂದಾಯವಾಗುತ್ತಿಲ್ಲ. ಈ ರೀತಿ ಟೆಲಿಕಾಂ ಸಂಸ್ಥೆಗಳಿಗೆ ತರಿಗೆ ಕಟ್ಟದೇ ಕೇಬಲ್ ಅಳವಡಿಕೆಗೆ ಅವಕಾಶ ನೀಡಿದಂತೆ ಜನಸಾಮಾನ್ಯರಿಗೂ ಆಸ್ತಿ ತೆರಿಗೆ ವಿನಾಯಿತಿ ನೀಡಿ ಎಂದು ಒತ್ತಾಯಿಸಿದರು.ಭೂತಗ ಕೇಬಲ್ ಅಳವಡಿಕೆಗೆ ಏನೆಲ್ಲ ಮಾನದಂಡಗಳಿವೆ? ಎಷ್ಟು ಕಿ.ಮೀ. ಕೇಬಲ್ ಹಾಕಲಾಗಿದೆ ಎಂಬುದರ ಕುರಿತು ಪಾಲಿಕೆಯ ಯಾವ ಅಧಿಕಾರಿಯ ಬಳಿಯೂ ಮಾಹಿತಿ ಇಲ್ಲ. 50 ಮೀಟರ್ ಅನುಮತಿ ಪಡೆದು 100 ಮೀಟರ್ ಕೇಬಲ್ ಅಳವಡಿಸುವ ಹಾಗೂ ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಂಬಕ್ಕೆ ಕೇಬಲ್ ಹಾಕುವ ಕೆಲಸವನ್ನು ಟೆಲಿಕಾಂ ಕಂಪನಿಗಳು ಮಾಡುತ್ತಿವೆ. ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಈ ಕುರಿತು ನೋಟಿಸ್ ನೀಡುವ ಮೂಲಕ ಎಲ್ಲ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯರೆಲ್ಲರೂ ಒತ್ತಾಯಿಸಿದರು.
15 ದಿನಗಳೊಳಗೆ ತೆರವು:ಪರವಾನಗಿ ಪಡೆಯದೇ ಅಕ್ರಮವಾಗಿ ಹಾಕಲಾದ ಟೆಲಿಕಾಂ ಸೇರಿದಂತೆ ಎಲ್ಲ ಕೇಬಲ್‌ಗಳನ್ನು 15 ದಿನಗಳೊಳಗೆ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗುವುದು. ಈ ಕುರಿತು ಹೆಸ್ಕಾಂ ಸಂಸ್ಥೆಗೂ ನೋಟಿಸ್ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭರವಸೆ ನೀಡಿದರು.
ಕಾಟಾಚಾರದ ಕೆಲಸ ಬೇಡ:ಕಳೆದ ಬಾರಿಯ ಸಭೆಯಲ್ಲಿ ನಾನು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಮಂಗಳವಾರ 50 ಪುಟಗಳ ಉತ್ತರದ ಪ್ರತಿ ನೀಡಿದ್ದಾರೆ. ಒಂದು ದಿನದಲ್ಲಿ ನಾನು ಅದನ್ನು ಹೇಗೆ ಓದಿ ಸಭೆಯಲ್ಲಿ ಚರ್ಚಿಸಲು ಸಾಧ್ಯವಾಗುತ್ತದೆ? ಪಾಲಿಕೆ ಅಧಿಕಾರಿಗಳ ಕಾಟಾಚಾರಕ್ಕೆ ಎಂಬಂತೆ ವರ್ತಿಸುತ್ತಿದ್ದಾರೆ. ನನಗೆ ಮುಂದಿನ ಸಭೆಯಲ್ಲಿ ಚರ್ಚಿಸಲು ಅವಕಾಶ ನೀಡಿ ಎಂದು ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್ ವೀಣಾ ಭರದ್ವಾಡ, ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಒಂದು ವಾರದೊಳಗೆ ತಮ್ಮ ಉತ್ತರದ ಪ್ರತಿಯನ್ನು ತಲುಪುವಂತೆ ನೋಡಿಕೊಳ್ಳಬೇಕು. ಜೊತೆಗೆ ಸದಸ್ಯರು ಸಭೆಯಲ್ಲಿ ಮಾತನಾಡಿದ ಎಲ್ಲ ವಿಷಯವನ್ನು ತಪ್ಪದೇ ನಡಾವಳಿಯಲ್ಲಿ ಸೇರಿಸಬೇಕು ಎಂದು ಸೂಚಿಸಿದರು.ಹೋಂಗಾರ್ಡ್ ನೇಮಿಸಿ:
ಮಹಾನಗರ ಪಾಲಿಕೆ ಆಸ್ತಿ ಸಂರಕ್ಷಣೆಗೆ ಅಗತ್ಯವಿರುವ 64 ಜನ ಭದ್ರತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಟೆಂಡರ್ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರದ ಅಧಿಸೂಚನೆ ಇದೆ. ಒಬ್ಬ ಭದ್ರತಾ ಸಿಬ್ಬಂದಿಗೆ ಮಾಸಿಕ ₹22,514 ವೇತನ ನಿಗದಿಪಡಿಸಿದ್ದು, ವಾರ್ಷಿಕ 64 ಸಿಬ್ಬಂದಿಗೆ ₹1 ಕೋಟಿ 72 ಲಕ್ಷ ಅಂದಾಜು ವೆಚ್ಚವಾಗಲಿದೆ. ಅದರ ಬದಲಾಗಿ ಕೇವಲ ₹10 ಸಾವಿರ ಮಾಸಿಕ ವೇತನದಲ್ಲಿ ಹೋಮ್‌ಗಾರ್ಡ್ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಪಾಲಿಕೆ ಹಣವನ್ನು ಉಳಿತಾಯ ಮಾಡಬಹುದು. ಅನಗತ್ಯವಾಗಿ ಟೆಂಡರ್ ಕರೆದು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಬೇಡ ಎಂದು ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಸಲಹೆ ನೀಡಿದರು. ಅದಕ್ಕೆ ಎಲ್ಲ ಸದಸ್ಯರು ಸಮ್ಮತಿ ಸೂಚಿಸಿದರು.ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ಟ್ರಕ್ ಮೌಂಟೆಡ್ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲು ಕರೆದ ಟೆಂಡರ್ನಲ್ಲಿ ಯಾರೊಬ್ಬರು ಟೆಂಡರ್ ದಾರರು ಭಾಗವಹಿಸುತ್ತಿಲ್ಲ. ಟೆಂಡರ್ ದರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಅದರನ್ವಯ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ ಎಂದು ಆಯುಕ್ತ ಈ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಸಭೆಯ ನಡಾವಳಿ, ಕಾನೂನು ಅಂಶಗಳನ್ನು ಪಾಲಿಕೆ ಅಧಿಕಾರಿಗಳು ಸಂಪೂರ್ಣ ಗಾಳಿಗೆ ತೋರುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಯಾವೊಬ್ಬ ಅಧಿಕಾರಿಗಳು ಬರುತ್ತಿಲ್ಲ. ಕೂಡಲೇ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಸಭೆಯಲ್ಲಿ ನಿರ್ಧರಿಸಿದ ಅಂಶಗಳನ್ನು ಹಾಗೂ ಆಯಾ ಇಲಾಖೆಗೆ ಸೂಚನೆಯನ್ನು ಆ ಅಧಿಕಾರಿಯೇ ಮಾಡಬೇಕು ಎಂದು ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಒತ್ತಾಯಿಸಿದರು.ಪಾಲಿಕೆ ಸದಸ್ಯರಾದ ನಿತಿನ್ ಇಂಡಿ, ಶಂಕರ ಶಳಕೆ, ರೂಪಾ ಶೆಟ್ಟಿ, ಇಮ್ರಾನ್ ಎಲಿಗಾರ, ಚೇತನ ಹಿರೇಕೆರೂರ ಸೇರಿದಂತೆ ಹಲವರಿದ್ದರು.
ವಿಪಕ್ಷ ನಾಯಕರು ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲಿ:ಮೇಯರ್ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಭೀರಪ್ಪ ಖಂಡೇಕರ್ ಮೇಯರ್ ಸ್ಥಾನದಲ್ಲಿ ಕುಳಿತು, ಮೇಯರ್ ಬರುವಿಕೆಗೆ ಒಂದೂ ಗಂಟೆಗಳ ಕಾಲ ಸಭೆಯನ್ನು ಮುಂದೂಡಿ ಆದೇಶಿಸಿದರು. ನಂತರ ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಮಾತನಾಡಿ, ಮೇಯರ್ ಮತ್ತು ವಿರೋಧ ಪಕ್ಷದ ನಾಯಕರು ಇಲ್ಲದೇ ಇದ್ದಾಗ ಪಾಲಿಕೆ ನಿಯಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಭೆ ನಡೆಸಲು ಅಧಿಕಾರವಿದೆಯಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ, ನಂತರ ಸಭೆ ನಡೆಸೋಣ ಎಂದು ಪಟ್ಟು ಹಿಡಿದರು.
ಆಗ ಸಭಾನಾಯಕ ಶಿವು ಹಿರೇಮಠ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮಧ್ಯಪ್ರವೇಶಿಸಿ, ಮೇಯರ್, ಉಪ ಮೇಯರ್ ಹಾಗೂ ವಿರೋಧ ಪಕ್ಷದ ನಾಯಕರು ಅನುಪಸ್ಥಿತಿಯಲ್ಲಿ ಸಭೆಯ ಒಪ್ಪಿಗೆ ಮೇರೆಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆ ನಡೆಸಬಹುದಾಗಿದೆ ಎಂದರು. ಆದರೂ ಕಲ್ಲಕುಂಟ್ಲ ಅವರು ಅದನ್ನು ಒಪ್ಪದೇ ಇದ್ದಾಗ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಪಾಲಿಕೆ ಬೈಲಾ ಓದುವ ಮೂಲಕ (ಪಾಲಿಕೆ ನಿಯಮ 71ಡಿ ಉಪಪ್ರಕರಣದ ಅಡಿ) ಸಭೆ ನಡೆಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ ನಂತರ ಗದ್ದಲ ತಣ್ಣಗಾಯಿತು. ದಯವಿಟ್ಟು ವಿರೋಧ ಪಕ್ಷದ ನಾಯಕರು ಒಬ್ಬ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಗೇಲಿ ಮಾಡಿದರು.ಒಂದೂವರೆ ಗಂಟೆ ತಡವಾಗಿ ಆರಂಭವಾದ ಸಭೆ:
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆಯಲ್ಲಿ ಮೇಯರ್ ವೀಣಾ ಬರದ್ವಾಡ ಶಿಷ್ಟಾಚಾರ ಪಾಲಗೆ ಮಾಡಲು ತೆರಳಿದ ಕಾರಣಕ್ಕೆ ಪಾಲಿಕೆ ಸಾಮಾನ್ಯ ಸಭೆ ಒಂದೂವರೆ ಗಂಟೆ ತಡವಾಗಿ ಆರಂಭವಾಗುವಂತಾಯಿತು. ನಿಗದಿಯಂತೆ ಬೆಳಗ್ಗೆ 11ಗಂಟೆಗೆ ಆರಂಭವಾಗಬೇಕಿದ್ದ ಸಭೆಯನ್ನು ಪಾಲಿಕೆ ಸರ್ವ ಸದಸ್ಯರು ಒಂದು ಗಂಟೆಗೆ ಮುಂದೂಡಿದರಾದರೂ, ಅದು ಒಂದೂವರೆ ಗಂಟೆಯ ನಂತರವೇ ಪ್ರಾರಂಭವಾಯಿತು.