ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಂಡಿದಾರಿ ಸಾರ್ವಜನಿಕ ರಸ್ತೆಯಂತಹ ಸ್ಥಳಗಳ ಒತ್ತುವರಿಯನ್ನು ಒಂದು ತಿಂಗಳೊಳಗೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ವಾಲ್ಮೀಕಿ ಭವನದಲ್ಲಿ ಬುಧವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕ ರಸ್ತೆ, ಬಂಡಿದಾರಿಯಂತಹ ಸ್ಥಳಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಭೂ ದಾಖಲೆ, ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಸಮರೋಪಾದಿಯಲ್ಲಿ ಒತ್ತುವರಿ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.ಮುನ್ನೆಚ್ಚರಿಕೆ ವಹಿಸಿ:
ಹಲವೆಡೆ ವಿದ್ಯುತ್ ತಂತಿಗಳು ಜೋತಾಡುತ್ತಿರುವ ಬಗ್ಗೆಯೂ ದೂರುಗಳು ಇವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ವ್ಯಾಪಕವಾಗಿ ಪರಿಶೀಲಿಸಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿ. ಎಲ್ಲಿಯೂ ಯಾವುದೇ ತೊಂದರೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು.ಜನತೆ ತಮ್ಮ ಸಮಸ್ಯೆ ಅಹವಾಲು ಪರಿಹರಿಸಿಕೊಳ್ಳಲು ಕಚೇರಿಗೆ ಬರುವ ಬದಲು, ಜನರ ಬಳಿಗೆ ಅಧಿಕಾರಿಗಳೊಂದಿಗೆ ತೆರಳಿ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಜನರಿಂದ ಸಲ್ಲಿಕೆಯಾದ ಅಹವಾಲುಗಳಿಗೆ ಶೀಘ್ರ ಪರಿಹಾರ ಸಿಗಬೇಕು. ಮುಂದಿನ ಕಾರ್ಯಕ್ರಮದ ವೇಳೆಗೆ ಅಧಿಕಾರಿಗಳು ಸಮಸ್ಯೆಗಳನ್ನು ಇತ್ಯರ್ಥಗೊಳಿಸಿರಬೇಕು ಎಂದು ತಿಳಿಸಿದರು.
ತ್ವರಿತ ಕಾಮಗಾರಿಗೆ ಸೂಚನೆ:ಸಭೆ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪ್ರತಿಯೊಬ್ಬರಿಂದ ಅಹವಾಲು ಆಲಿಸಿದರು. ಗ್ರಾಮದ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣಗೊಂಡಿದೆ. ಮೊದಲನೆ ಅಂತಸ್ತು ಪೂರ್ಣಗೊಳ್ಳಬೇಕಿದ್ದು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದರು. ಸಭೆಯಲ್ಲಿಯೇ ಇದ್ದ ಅಧಿಕಾರಿಗಳಿಗೆ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು. ಹೆಚ್ಚುವರಿ ಅನುದಾನ ಪಡೆಯಲು ಮುಂದಿನ ಕ್ರಮ ವಹಿಸಬೇಕೆಂದು ಸೂಚಿಸಿದರು.
ಸ್ಥಳ ಒತ್ತುವರಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ:ಸಭೆಯಲ್ಲಿ ಸ್ಥಳೀಯರು ದಾರಿ, ಸಾರ್ವಜನಿಕ ರಸ್ತೆ, ಕೆರೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಸೆಳೆದರು. ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಒಂದು ತಿಂಗಳೊಳಗೆ ಈ ಬಗ್ಗೆ ತಹಶೀಲ್ದಾರರು, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಒತ್ತುವರಿ ತೆರವಿಗೆ ಮುಂದಾಗಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಿಸಲವಾಡಿ, ಅಮಚವಾಡಿ, ಎಣ್ಣೆಹೊಳೆ, ಚೆನ್ನಪ್ಪನಪುರ ದೇವಾಲಯಗಳು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದನ್ನು ತಡೆಯಬೇಕೆಂಬ ಗ್ರಾಮಸ್ಥರೋರ್ವರು ಪ್ರಸ್ತಾಪಿಸಿದ ವೇಳೆ ಜಿಲ್ಲಾಧಿಕಾರಿಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದಲ್ಲಿ ನಿಲ್ಲಿಸಬೇಕು. ಒಂದು ವಾರದೊಳಗೆ ದೂರಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ನೀಡಬೇಕು. ಇಲ್ಲವಾದಲ್ಲಿ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.ಬಯಲು ರಂಗಮಂದಿರ ಪೂರ್ಣಗೊಳಿಸಿ:
ಸಮುದಾಯ ಭವನದ ಆವರಣದಲ್ಲಿ ಅಪೂರ್ಣವಾಗಿರುವ ಬಯಲು ರಂಗಮಂದಿರವನ್ನು ಪೂರ್ಣಗೊಳಿಸಬೇಕು ಎಂದು ಹಿರಿಯ ಕಲಾವಿದ ಘಟಂ ಕೃಷ್ಣ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು. ಈ ಸಂಬಂಧ ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮುಂದಿನ ಕಾಮಗಾರಿ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸಭೆಯ ಬಳಿಕ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪಶು ಆಸ್ಪತ್ರೆಗೆ ಒತ್ತು:
ಹರದನಹಳ್ಳಿ ಹೋಬಳಿಯಲ್ಲಿ ಪಶು ಆಸ್ಪತ್ರೆ ಇಲ್ಲವಾದ್ದರಿಂದ ವೆಂಕಟಯ್ಯನಛತ್ರಕ್ಕೆ ಹೋಗಬೇಕಿದೆ. ಇಲ್ಲಿಯೇ ಆಸ್ಪತ್ರೆ ನಿರ್ಮಾಣವಾದರೆ ಅನುಕೂಲವಾಗಲಿದೆ ಎಂಬ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಪಶುಸಂಗೋಪನೆ ಇಲಾಖೆಯ ಸಚಿವರೂ ಆಗಿರುವುದರಿಂದ ಅವರ ಗಮನಕ್ಕೆ ಈ ವಿಷಯ ತರಲಾಗುವುದು. ಪಶು ಆಸ್ಪತ್ರೆಯ ಅಗತ್ಯ ಕುರಿತು ಅಧಿಕಾರಿಗಳಿಂದ ಪರಿಶೀಲಿಸಿ ವರದಿ ಪಡೆಯಲಾಗುವುದು ಎಂದರು.ಸ್ಥಳೀಯ ಆಸ್ಪತ್ರೆಗೆ ವೈದ್ಯರು, ನರ್ಸ್‌ಗಳ ನೇಮಕ, ದಿವ್ಯಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ, ಹೆದ್ದಾರಿ, ಇತರೆ ರಸ್ತೆಗಳ ದುರಸ್ತಿ, ಕೆಎಸ್‌ಆರ್‌ಟಿಸಿ ಬಸ್ಸುಗಳ ಸೇವೆ, ಕಾಲುವೆ ನಿರ್ಮಾಣ, ಅಕ್ರಮ ಮದ್ಯ ಮಾರಾಟ ತಡೆ, ಖಾತೆ, ಇ-ಸ್ವತ್ತು ವಿಳಂಬ ಸೇರಿ ಇನ್ನಿತರ ಸಮಸ್ಯೆಗಳ ಕುರಿತು ಜನರಿಂದ ಅಹವಾಲುಗಳು ಸಲ್ಲಿಕೆಯಾದವು.
ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಸಿ ಮಹೇಶ್, ತಹಶೀಲ್ದಾರ್ ಬಸವರಾಜು, ತಾಪಂ ಇಒ ಪೂರ್ಣಿಮಾ ಸೇರಿ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.