ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಣ್ಯ ಅಧಿಕಾರಿಗಳು ಸಾಗುವಳಿ ಪಡೆದ ಜಮೀನಿನಿಂದ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹೊಳೆಹೊನ್ನೂರು ಹೋಬಳಿಯ ಅರಣ್ಯ ಹಕ್ಕು ಸಮಿತಿ ಮತ್ತು ಬಗರ್‌ಹುಕುಂ ಸಾಗುವಳಿದಾರರು ಹಾಗೂ ರೈತ ಪರ ಸಂಘಟನೆಗಳಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ರೈತರು ಉಳುಮೆ ಮಾಡುತ್ತ ಬಂದಿದ್ದು, ಫಾರಂ ನಂ.50 ಮತ್ತು 53ರ ಅಡಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಪಡೆದು ಖಾತೆ ಮತ್ತು ಪಹಣಿಯನ್ನು ಪಡೆದಿರುತ್ತಾರೆ. ಆದರೆ, ಇತ್ತೀಚೆಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಅರಣ್ಯಾಧಿಕಾರಿಗಳು ಜಮೀನನ್ನು ತೆರವುಗೊಳಿಸಬೇಕು ಎಂದು ನೋಟಿಸ್ ಜಾರಿ ಮಾಡಿದ್ದಾರೆ ಎಂದು ದೂರಿದರು.
1990ರಲ್ಲಿ ಫಾರಂ ನಂ.50 ಮತ್ತು 98ರಲ್ಲಿ ಫಾರಂ. ನಂ. 53ಯನ್ನು ಪ.ಜಾ.ಪ.ಪಂ. ಬಡರೈತರಿಗೆ ಸರ್ಕಾರದಿಂದ ಹಂತ ಹಂತವಾಗಿ ಸಾಗುವಳಿ ಪತ್ರ, ಖಾತೆ ಪಹಣಿ ನೀಡಿದ್ದು, ಅನೇಕ ವರ್ಷಗಳಿಂದ ಜಮೀನನ್ನು ಉಳುಮೆ ಮಾಡಿಕೊಂಡು ತೋಟದ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತ ಬಂದಿದ್ದಾರೆ. ಬೋರ್‍ವೆಲ್ ಕೊರೆಸಿದ್ದಾರೆ. ಸರ್ಕಾರಿ ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದಾರೆ. 40 ವರ್ಷ ಸಾಗುವಳಿ ಮಾಡಿದ ದಾಖಲೆಗಳಿವೆ. ಆದರೂ ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಾಗುವಳಿ ರೈತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ರೈತಸಂಘ ಆಗ್ರಹಿತು.ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಚಂದ್ರೇಗೌಡ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅರ್ಹ ಫಲಾನುಭವಿಗಳಿಗೆ ಕಾನೂನಿನಂತೆ ಒಂದು ಬಾರಿ ಹಕ್ಕುಪತ್ರ ಮತ್ತು ಪಹಣಿ ನೀಡಿದ ಮೇಲೆ ಅವನು ನೈಜ ರೈತನಾಗಿದ್ದಲ್ಲಿ ಹಕ್ಕುಪತ್ರ ರದ್ದುಪಡಿಸುವ ಅಧಿಕಾರ ಯಾರಿಗೂ ಇಲ್ಲ. ಕೋರ್ಟ್ ಆದೇಶದ ನೆಪವೊಡ್ಡಿ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿ.ನಾ.ಶ್ರೀನಿವಾಸ್ ಮಾತನಾಡಿ, ಅಡಿಕೆ ಮತ್ತು ತೆಂಗು ಬೆಳೆಯಲು ಅನೇಕ ವರ್ಷಗಳು ಬೇಕು,ಹೈಕೋರ್ಟ್ ಆದೇಶವೇ ಇದೆ. ಸಾಗುವಳಿದಾರ ರೈತನಿಗೆ ಒಕ್ಕಲೆಬ್ಬಿಸಲು ಆಗುವುದಿಲ್ಲ. ಅಧಿಕಾರಿಗಳು ಬಂದರೆ, ಸುಳ್ಳು ಕೇಸ್ ಹಾಕಲು ಮುಂದಾದರೆ ಗ್ರಾಮಸ್ಥರು ಕಟ್ಟಿಹಾಕಿ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗೋಣ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶಾಸಕಿ ಶಾರದಪೂರ್ಯ ನಾಯ್ಕ ಮಾತನಾಡಿ, ಮಂಜೂರಾತಿ ಪೂರ್ವದಲ್ಲಿ ಮಾಡಿದ ಬಗರ್‍ಹುಕುಂ ಪಟ್ಟಿ ನಕಾಶೆ ಎಲ್‍ಎನ್‍ಡಿ ಆದೇಶ ಪ್ರತಿ, ಸಾಗುವಳಿ ಚೀಟಿ, ಮ್ಯೂಟೇಷನ್ ಮತ್ತು ಖಾತೆ, ಪಹಣಿ ಇದ್ದರೂ ಕೂಡ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಮುಖರಾದ ರೈತ ಸಂಘದ ಎಚ್.ಆರ್.ಬಸವ ರಾಜಪ್ಪ, ಕಾಂತರಾಜ್, ಬಿ.ಎನ್.ರಾಜು, ಗೀತಾ ಸತೀಶ್, ಮೋಹನ್, ಜಗದೀಶ್ ಗೌಡ, ಗುರೇಮಟ್ಟಿ ಮಲ್ಲಯ್ಯ ಹಾಗೂ ಹೊಳೆಹೊನ್ನೂರು ಭಾಗದ ರೈತರು ಉಪಸ್ಥಿತರಿದ್ದರು. ಅರಣ್ಯ ನಾಶ ಸುಳ್ಳು ಕೇಸ್ರೈತರು ಸೂಕ್ತ ದಾಖಲೆಗೊಂದಿಗೆ ತಮ್ಮ ಜಮೀನನ್ನು ರಕ್ಷಣೆ ಮಾಡಿಕೊಳ್ಳಲು ಹೋದಲ್ಲಿ ಅರಣ್ಯಾಧಿಕಾರಿಗಳು ರೈತರ ವಿರುದ್ಧ ಶ್ರೀಗಂಧ, ಬೀಟೆ, ಸಾಗವಾನಿ ಇತರ ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡಿ ಅರಣ್ಯ ನಾಶ ಮಾಡಿದ್ದಾರೆ ಎಂದು ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ರೈತರು ಬೆಳೆದ ಅಡಿಕೆ ತೆಂಗು ಬೆಳೆ ಗಳನ್ನು ನಾಶ ಮಾಡಿ ದೊಡ್ಡ ಯಂತ್ರಗಳನ್ನು ಬಳಸಿ ಕಾಲುವೆಯನ್ನು ನಿರ್ಮಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.