ಸಾರಾಂಶ
ಚಂದ್ರಗುತ್ತಿ ಗ್ರಾಮಸ್ಥರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಕಂದಾಯ ಅಧಿಕಾರಿಗಳು ಸರ್ಕಾರಿ ಸ್ವತ್ತಿನ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಶೆಡ್ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ, ಜಾಗವನ್ನು ವಶಕ್ಕೆ ಪಡೆದರು.
- ಚಂದ್ರಗುತ್ತಿ ಗ್ರಾಮದಲ್ಲಿ ಕಾರ್ಯಾಚರಣೆ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಚಂದ್ರಗುತ್ತಿ ಗ್ರಾಮದ ಕಂದಾಯ ಜಮೀನಿನ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ಡನ್ನು ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ಚಂದ್ರಗುತ್ತಿ ಗ್ರಾ.ಪಂ.ವ್ಯಾಪ್ತಿಯ ಕಮಲಾಪುರ ಗ್ರಾಮದ ನಾಗರಾಜ ಎಂಬುವವರು ಚಂದ್ರಗುತ್ತಿ ಗ್ರಾಮದಿಂದ ೧ ಕಿ.ಮೀ. ದೂರದಲ್ಲಿರುವ ಚಂದ್ರಗುತ್ತಿ- ಹರೀಶಿ ಗ್ರಾಮಗಳಿಗೆ ತೆರಳುವ ಮಾರ್ಗಮಧ್ಯದಲ್ಲಿರುವ ಸರ್ವೆ ನಂ.೨೫ರ ಕಂದಾಯ ಜಮೀನಿನ ೧೨*೧೪ ಅಡಿ ಜಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ ವಾಸಕ್ಕಾಗಿ ಒತ್ತುವರಿ ನಡೆಸಿ ತಗಡಿನ ಶೆಟ್ ನಿರ್ಮಿಸಿಕೊಂಡಿದ್ದರು. ಇದರಿಂದ ಚಂದ್ರಗುತ್ತಿ ಗ್ರಾಮದವರು ತಮ್ಮ ಜಮೀನುಗಳಿಗೆ ಓಡಾಡಲು ಜಾಗ ಇಲ್ಲವಾಯಿತು. ಇದೂ ಅಲ್ಲದೇ ಶೆಡ್ ನಿರ್ಮಿಸಿಕೊಂಡಿದ್ದ ಜಾಗ ಸರ್ಕಾರಿ ಸ್ವತ್ತು ಆಗಿರುವುದರಿಂದ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ಡನ್ನು ತೆರವುಗೊಳಿಸುವಂತೆ ಸೊರಬ ತಹಶೀಲ್ದಾರರಿಗೆ ಗ್ರಾಮಸ್ಥರು ದೂರು ನೀಡಿದ್ದರು.ಚಂದ್ರಗುತ್ತಿ ಗ್ರಾಮಸ್ಥರು ನೀಡಿದ ದೂರಿನನ್ವಯ ತಹಶೀಲ್ದಾರ್ ಹುಸೇನ್ ಸರಕಾವಸ್ ಅವರ ಆದೇಶದ ಮೇರೆಗೆ ಗುರುವಾರ ಚಂದ್ರಗುತ್ತಿ ನಾಡ ಕಛೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸರ್ಕಾರಿ ಸ್ವತ್ತಿನ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಶೆಟ್‌ನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ, ಜಾಗವನ್ನು ವಶಕ್ಕೆ ಪಡೆದರು.
ತೆರವು ಕಾರ್ಯಾಚರಣೆಯಲ್ಲಿ ಚಂದ್ರಗುತ್ತಿ ನಾಡ ಕಛೇರಿ ಪ್ರಭಾರ ಉಪ ತಹಶೀಲ್ದಾರ್ ವಿ.ಎಲ್.ಶಿವಪ್ರಸಾದ್, ಗ್ರಾಮ ಆಡಳಿತಾಧಿಕಾರಿಗಳಾದ ಎಂ.ಸುಧೀರ್, ಇಮಾಮ್ ಖಾಸಿಂ, ರವಿಕುಮಾರ್, ಕರಿ ಬಸವರಾಜ, ದಾನೇಶ್, ದುರ್ಗೋಜಿ, ಸೊರಬ ಪೊಲೀಸ್ ಠಾಣೆಯ ಎಎಸ್‌ಐ ಲಿಂಗರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.ತಹಶೀಲ್ದಾರರ ಆದೇಶದ ಮೇರೆಗೆ ಸರ್ಕಾರಿ ಅತಿಕ್ರಮಣ ಜಾಗವನ್ನು ತೆರವುಗೊಳಿಸಲಾಗಿದೆ. ಇದೇ ರೀತಿ ಚಂದ್ರಗುತ್ತಿ ಕಂದಾಯ ಜಮೀನು ವ್ಯಾಪ್ತಿಯಲ್ಲಿ ಅತಿಕ್ರಮಣ ವಾಗಿರುವ ಬಗ್ಗೆ ಮಾಹಿತಿ ಪಡೆದು ಶೀಘ್ರದಲ್ಲಿಯೇ ತೆರವು ಕಾರ್ಯಾಚರಣೆ ನಡೆಸಲಾಗುವುದು.– ವಿ.ಎಲ್. ಶಿವಪ್ರಸಾದ್, ಪ್ರಭಾರ ಉಪ ತಹಶೀಲ್ದಾರ್೧೮ಕೆಪಿಸೊರಬ-೦೩ : ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಕಂದಾಯ ಜಮೀನಿನ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ಡನ್ನು ಅಧಿಕಾರಿಗಳು ತೆರವುಗೊಳಿಸಿದರು.