ಸಾರಾಂಶ
ತಾಲೂಕಿನ ಹೆಸರಾಂತ ಸೂಳೆಕೆರೆಯ ಒತ್ತುವರಿ ಪ್ರದೇಶ ಬಿಡಿಸುವ ಸಲುವಾಗಿ ಕಳೆದ 8ರಿಂದ 10 ದಿನಗಳಿಂದ ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಎನ್.ಜೆ. ನಾಗರಾಜ್ ನೇತೃತ್ವದಲ್ಲಿ ಸರ್ವೆಕಾರ್ಯ ನಡೆಯಿತು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಹೆಸರಾಂತ ಸೂಳೆಕೆರೆಯ ಒತ್ತುವರಿ ಪ್ರದೇಶ ಬಿಡಿಸುವ ಸಲುವಾಗಿ ಕಳೆದ 8ರಿಂದ 10 ದಿನಗಳಿಂದ ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಎನ್.ಜೆ. ನಾಗರಾಜ್ ನೇತೃತ್ವದಲ್ಲಿ ಸರ್ವೆಕಾರ್ಯ ನಡೆಯಿತು.145.35ಎಕ್ಕರೆ ಕೆರೆಯ ಒತ್ತುವರಿ ಪ್ರದೇಶವನ್ನು ಬೃಹತ್ ನೀರಾವರಿ ಇಲಾಖೆ ಅಭಿಯಂತರರಾದ ತಿಪ್ಪೇಸ್ವಾಮಿ. ವಿಜಯ್ ಮತ್ತು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಶೋಕ್ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಸೂಳೆಕೆರೆಯ ವಿಸ್ತಾರವು 5.447 ಎಕರೆ ಭೂ ಪ್ರದೇಶದಲ್ಲಿದ್ದು, ಇದರಲ್ಲಿ 247 ಎಕರೆ ಭೂ ಪ್ರದೇಶವನ್ನು ಕೆರೆಯ ಆಸುಪಾಸಿನ ರೈತರು ಒತ್ತುವರಿ ಮಾಡಿಕೊಂಡಿದ್ದರು. ಈ ಭೂ ಪ್ರದೇಶ ಸರ್ವೆ ಮಾಡಿಸಿ ಕೆರೆಯ ಸಂರಕ್ಷಣೆಯನ್ನು ಮಾಡಬೇಕು ಎಂದು ಹಲವಾರು ಸಂಘಟನೆಗಳು ಈ ಹಿಂದೆ ಪ್ರತಿಭಟನೆಯನ್ನು ನಡೆಸಿದ್ದರು. ಪ್ರಸ್ತುತ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕೆರೆಯನ್ನು ಮತ್ತು ಸೂಳೆಕೆರೆ ಸರ್ವೆ ನಂಬರ್ 1ರ ಒತ್ತುವರಿ ಮತ್ತು ಕೆರೆಯ ಅಮೃತ ಮಹಲ್ ಕಾವಲ್ ಜಮೀನಿನ ವಿಸ್ತೀರ್ಣ ಸರ್ವೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.ಕೆರೆಯ ಒತ್ತುವರಿಯ ಇನ್ನುಳಿದ 102 ಎಕರೆ ಭೂ ಪ್ರದೇಶ ವಶಕ್ಕೆ ಪಡೆಯಲು ಸರ್ವೆ ಕಾರ್ಯ ಮುಂದುವರೆದಿದೆ. ಕೆಲವೇ ದಿನಗಳಲ್ಲಿ ಒತ್ತುವರಿ ಮಾಡಿದವರಿಂದ ಕೆರೆಯ ಜಾಗ ಬಿಡಿಸಿಕೊಳ್ಳಲು ಸರ್ವೆ ನಡೆಯುತ್ತಿದೆ. ಒತ್ತುವರಿಯಾಗಿರುವ 247 ಎಕರೆ ಭೂ ಪ್ರದೇಶ ಬಿಡಿಸಿಕೊಳ್ಳುವುದರಿಂದ ಕೆರೆಯಲ್ಲಿ ನೀರಿನ ಸಂಗ್ರಹಣೆ ಇನ್ನು ಹೆಚ್ಚಾಗಲಿದೆ.
ಒತ್ತುವರಿ ಕೆರೆ ಜಾಗದ ಹಸ್ತಾಂತರದ ಸಂದರ್ಭ ಉಪ ತಹಸೀಲ್ದಾರ್ ಜಗದೀಶ್, ಕಂದಾಯ ಅಧಿಕಾರಿಗಳಾದ ಸಿದ್ದರಾಮೇಶ್, ಪ್ರಸನ್ನಕುಮಾರ್, ಗ್ರಾಮ ಲೆಕ್ಕಾಧಿಕಾರಿ ಸೋಮಶೇಖರ್, ಶಾಂತಮ್ಮ ಸೇರಿದಂತೆ ಸರ್ವೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.