ಪಟ್ಟಣದ ಬಸ್ ನಿಲ್ದಾಣದ ಮುಖ್ಯ ರಸ್ತೆ, ಆಸ್ಪತ್ರೆ ಮುಂಭಾಗ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ "ಪಾದಚಾರಿ ಮಾರ್ಗ " ದಲ್ಲಿ ನಿಗದಿತ ಪ್ರದೇಶಕ್ಕಿಂತ ಹೆಚ್ಚು ಜಾಗ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಸ್ಥಳವನ್ನು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪಪಂ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿದರು.

ಕನ್ನಡಪ್ರಭವಾರ್ತೆ ಆಲೂರು

ಪಟ್ಟಣದ ಬಸ್ ನಿಲ್ದಾಣದ ಮುಖ್ಯ ರಸ್ತೆ, ಆಸ್ಪತ್ರೆ ಮುಂಭಾಗ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ "ಪಾದಚಾರಿ ಮಾರ್ಗ " ದಲ್ಲಿ ನಿಗದಿತ ಪ್ರದೇಶಕ್ಕಿಂತ ಹೆಚ್ಚು ಜಾಗ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಸ್ಥಳವನ್ನು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪಪಂ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್‌ ಮಲ್ಲಿಕಾರ್ಜುನ್ ಮಾತನಾಡಿ, ಆಲೂರು ಪಟ್ಟಣ ಸುಂದರವಾಗಿ ಕಾಣಲು ಪ್ರತಿಯೊಬ್ಬರ ಸಹಕಾರ ಮುಖ್ಯ. ಆಲೂರು ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಹೇಗೆ ಬೇಕು ಹಾಗೆ ಪ್ಲಾಸ್ಟಿಕ್ ಗಳನ್ನು ಕಟ್ಟಿಕೊಂಡು ಪಟ್ಟಣದ ಸೌಂದರ್ಯವನ್ನು ಹಾಳು ಮಾಡಿದ್ದರು. ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಪಟ್ಟಣದ ವರ್ತಕರು ಅವರಿಗೆ ನೀಡಿದ ನಿಗದಿತ ಸ್ಥಳಕ್ಕಿಂತ ಹೆಚ್ಚುವರಿಯಾಗಿ ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡುತ್ತಿದ್ದರು. ಇದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆ. ಈ ವಿಷಯವಾಗಿ ಪಾದಚಾರಿ ರಸ್ತೆಯನ್ನು ತೆರವು ಗೊಳಿಸುವಂತೆ ಸಾರ್ವಜನಿಕರಿಂದ ದೂರು ಬಂದಿತ್ತು.

ಕಳೆದ ವಾರ ನಡೆದ ಪಪಂ ಆಯವ್ಯಯ ಪೂರ್ವ ಬಾವಿ ಸಭೆಯಲ್ಲಿಯೂ ಕೂಡ ಅತಿಕ್ರಮಿಸಿಕೊಂಡಿದ್ದ ಸ್ಥಳವನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಹೆಚ್ಚಿನದಾಗಿ ಚರ್ಚೆ ನಡೆದು ಭಾನುವಾರದವರೆಗೆ ಪಾದಚಾರಿ ರಸ್ತೆಯನ್ನು ತೆರವುಗೊಳಿಸುವಂತೆ ಸಮಯವಕಾಶ ನೀಡಲಾಗಿತ್ತು ಆದರೂ ವ್ಯಾಪಾರಸ್ಥರು ತೆರವಿಗೆ ಮುಂದಾಗಿರಲಿಲ್ಲ. ಈ ಸಂಬಂಧವಾಗಿ ಸೋಮವಾರ ಬೆಳಗ್ಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವು ಕಾರ್ಯಚರಣೆ ನಡೆಸಲಾಯಿತು ಎಂದರು.

ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಬಹುತೇಕ ಅಂಗಡಿಯವರು ತಮ್ಮ ಅಂಗಡಿಗಳ ಸರುಕುಗಳನ್ನು ಅಂಗಡಿಗಳ ಹೊರಗಡೆ ಪಾದಚಾರಿ ರಸ್ತೆಯಲ್ಲಿ ಇಟ್ಟು ವ್ಯಾಪಾರ ನಡೆಸುತ್ತಿದ್ದರಿಂದ ವಾಹನ ನಿಲುಗಡೆಗೆ ಹಾಗೂ ಪಾದಾಚಾರಿಗಳು ಸಂಚಾರ ಮಾಡುವುದೇ ಕಷ್ಟವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪಪಂಗೆ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಹಾಗೂ ಪಪಂ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಅಂಗಡಿ ಸರಕುಗಳನ್ನು ಇಡದೆ ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚಾರಿಸಲು ಅಂಗಡಿ ಮಾಲೀಕರು ಸಾರ್ವಜನಿಕರು ಸಹರಿಸಬೇಕು ಎಂದರು.ನಾಗರಿಕರಾದ ವಿಕಾಸ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಹಲವು ವಿದ್ಯಾಸಂಸ್ಥೆಗಳಿವೆ. ತಾಲೂಕಿನ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಜನ ಪಟ್ಟಣಕ್ಕೆ ಬರುತ್ತಾರೆ. ಆದರೆ ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳ ಪಾದಚಾರಿ ರಸ್ತೆಯನ್ನು ವ್ಯಾಪಾರಿಗಳು ಆವರಿಸಿಕೊಂಡಿದ್ದು ಪಾದಚಾರಿಗಳು ನಡು ರಸ್ತೆಯಲ್ಲಿಯೇ ಸಂಚರಿಸುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಿಂದ ಹಿಡಿದು ಶಿಕ್ಷಣ ಸಂಸ್ಥೆಯವರೆಗೆ, ಮುಖ್ಯ ರಸ್ತೆಯ ಎರಡೂ ಬದಿಗಳು ವ್ಯಾಪಾರಿಗಳು ಮತ್ತಿತರರಿಂದ ಅತಿಕ್ರಮಣಕ್ಕೆ ಒಳಗಾಗಿದೆ. ಹಾಗಾಗಿ ನಡು ರಸ್ತೆಯಲ್ಲೇ ಜನ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಫುಟ್‌ಪಾತ್ ತೆರವು ಕಾರ್ಯಾಚರಣೆ ಆರಂಭಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪಪಂ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ಸರ್ಕಾರಿ ಆಸ್ಪತ್ರೆ ಮುಂಭಾಗದ ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿರದ ಬಗ್ಗೆ ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ನಮಗೆ ಮಾಹಿತಿ ನೀಡದೆ ಏಕಾಏಕಿ ತೆರವುಗೊಳಿಸುತ್ತಿದ್ದಾರೆ. ದೊಡ್ಡವರು ಬಡವರು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ನ್ಯಾಯ ಸಿಗಬೇಕು. ಅತಿಕ್ರಮವಾಗಿ ಅಕ್ರಮಿಸಿಕೊಂಡಿರುವ ಚಾವಣಿ ಶೀಟ್‌ಗಳನ್ನು ತೆರವು ಗೊಳಿಸಬೇಕೆಂದು ವರ್ತಕರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.