ಸಾರಾಂಶ
ಜೂನಿಯರ್ ಕಾಲೇಜು ಆವರಣದ ಫುಟ್ಪಾತ್ ಮೇಲೆ ಅಂಗಡಿ ಹಾಕಿಕೊಂಡು ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ವಿದ್ಯಾರ್ಥಿಗಳ ದೂರಿನ ಮೇರೆಗೆ ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಫುಟ್ಪಾತ್ ಮೇಲಿನ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಮೆಚ್ಚುಗಾಗಿ ಪಾತ್ರರಾಗಿದ್ದಾರೆ. ತಳ್ಳುವ ಗಾಡಿಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತದೆ ಎಂಬ ನಿಟ್ಟಿನಲ್ಲಿ ಹರ್ಡಿಕರ್ ವೃತ್ತದ ಬಳಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಜೂನಿಯರ್ ಕಾಲೇಜು ಆವರಣದ ಫುಟ್ಪಾತ್ ಮೇಲೆ ಅಂಗಡಿ ಹಾಕಿಕೊಂಡು ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ವಿದ್ಯಾರ್ಥಿಗಳ ದೂರಿನ ಮೇರೆಗೆ ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಫುಟ್ಪಾತ್ ಮೇಲಿನ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಮೆಚ್ಚುಗಾಗಿ ಪಾತ್ರರಾಗಿದ್ದಾರೆ. ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಫುಟ್ಪಾತ್ ಮೇಲಿನ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿದೆ. ಸುಗಮ ಸಂಚಾರಕ್ಕೆ ಇಲ್ಲಿನ ಪೊಲೀಸ್ ಇಲಾಖೆಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊಳೆಬೀದಿಗೂ ಕೂಡ ಡಾಂಬರ್ ಹಾಕಿಸಲು ಮುಂದಾಗಿದೆ. ತಳ್ಳುವ ಗಾಡಿಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತದೆ ಎಂಬ ನಿಟ್ಟಿನಲ್ಲಿ ಹರ್ಡಿಕರ್ ವೃತ್ತದ ಬಳಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ ಎಂದರು. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಡೆಗೋಡೆ ನಿರ್ಮಿಸಿ ಉಳಿದ ಜಾಗದಲ್ಲಿ ಪಾನಿಪೂರಿ, ತಿಂಡಿ-ತಿನಸುಗಳನ್ನು ಇಟ್ಟುಕೊಂಡು ಗಾಡಿಯಲ್ಲಿ ವ್ಯಾಪಾರ ನಡೆಸುತ್ತಾರೆ. ಆದರೆ ಕೆಲವರು ತಳ್ಳುವ ಗಾಡಿಗಳನ್ನು ಬಾಡಿಗೆಗೆ ನೀಡಿದ ಬಗ್ಗೆ ಖಚಿತ ಮಾಹಿತಿ ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಶಾಸಕರ ಜೊತೆಗೆ ಚರ್ಚಿಸಿ ಹೈಟೆಕ್ ಮಾದರಿಯಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಪುರಸಭೆಯಲ್ಲಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ಮತ್ತು ಆಶ್ರಯ ಮನೆಗಳನ್ನು ನೀಡುವ ಸಂಬಂಧ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ನಮ್ಮವರೆ ಕೆಲವರು ಈ ಬಗ್ಗೆ ಸಾರ್ವಜನಿಕವಾಗಿ ಸತ್ಯಕ್ಕೆ ದೂರವಾದ ವಿಚಾರವನ್ನು ಬಿಂಬಿಸುತ್ತಿದ್ದಾರೆ. ಅಧ್ಯಕ್ಷರಾದ ಮೇಲೆ ಪಟ್ಟಣದಲ್ಲಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧ್ಯಕ್ಷ ಸ್ಥಾನದ ಅಧಿಕಾರ ಇರುವ ತನಕ ಪ್ರಾಮಾಣಿಕ ಸೇವೆ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಲೋಹಿತ್, ಸಿಬ್ಬಂದಿ ಹರೀಶ್, ಇತರರು ಹಾಜರಿದ್ದರು.