ಮದ್ದೂರಮ್ಮ ಬಡಾವಣೆಯಲ್ಲಿ ಕೆಲವು ವ್ಯಕ್ತಿಗಳು ಹಲವು ವರ್ಷಗಳಿಂದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ಮತ್ತು ಕಾಂಪೌಂಡ್ ಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಬಡಾವಣೆ ನಿವಾಸಿಗಳಿಗೆ ರಸ್ತೆ, ಚರಂಡಿ ನಿರ್ಮಾಣದೊಂದಿಗೆ ಮೂಲ ಸೌಲಭ್ಯ ಕಲ್ಪಿಸಲು ಅಡ್ಡಿ ಉಂಟಾಗಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆ 21ನೇ ವಾರ್ಡ್ ವ್ಯಾಪ್ತಿಯ ಮದ್ದೂರಮ್ಮ ಬಡಾವಣೆಯ ಸರ್ಕಾರಿ ಜಾಗದ ಅಕ್ರಮ ಕಟ್ಟಡಗಳ ಒತ್ತುವರಿ ತೆರವು ಕಾರ್ಯಾಚರಣೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಎರಡನೇ ದಿನವೂ ಮುಂದುವರೆಯಿತು.ತೆರವು ಕಾರ್ಯಾಚರಣೆಗೆ ಕಟ್ಟಡ ಮಾಲೀಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಇಳಿದು ತಳ್ಳಾಟ- ನೂಕಾಟ ನಡೆಸಿ ಜೆಸಿಬಿ ಯಂತ್ರಗಳನ್ನು ತಡೆದು ರಂಪಾಟ ನಡೆಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಯಿತು. ಸ್ಥಳದಲ್ಲಿದ್ದ ಪೊಲೀಸರು ಕಟ್ಟಡದ ಮಹಿಳಾ ಮಾಲೀಕರನ್ನು ವಶಕ್ಕೆ ತೆಗೆದುಕೊಂಡರು.
ಮದ್ದೂರಮ್ಮ ಬಡಾವಣೆಯಲ್ಲಿ ಕೆಲವು ವ್ಯಕ್ತಿಗಳು ಹಲವು ವರ್ಷಗಳಿಂದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ಮತ್ತು ಕಾಂಪೌಂಡ್ ಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಬಡಾವಣೆ ನಿವಾಸಿಗಳಿಗೆ ರಸ್ತೆ, ಚರಂಡಿ ನಿರ್ಮಾಣದೊಂದಿಗೆ ಮೂಲ ಸೌಲಭ್ಯ ಕಲ್ಪಿಸಲು ಅಡ್ಡಿ ಉಂಟಾಗಿತ್ತು.ಈ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರ ಸೂಚನೆಯಂತೆ ಒತ್ತುವರಿ ಜಾಗದ ಸರ್ವೇ ಕಾರ್ಯ ನಡೆಸಿದಾಗ ಕೆಲವು ಕಟ್ಟಡಗಳ ಮಾಲೀಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರು. ನಂತರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪುರಸಭೆ ಕಂದಾಯ ಅಧಿಕಾರಿಗಳೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಬುಧವಾರ ಮನೆಗಳ ಕಾಂಪೌಂಡ್ ಗಳನ್ನು ತೆರವುಗೊಳಿಸಿ ಗುರುವಾರವೂ ಸಹ ಕಾರ್ಯಾಚರಣೆಗೆ ಇಳಿದರು.
ಮದ್ದೂರಮ್ಮ ಬಡಾವಣೆಯಲ್ಲಿ ಸರ್ಕಾರಿ ಜಾಗದ ಒತ್ತುವರಿ ಮಾಡಿಕೊಂಡು ರಕ್ಷಿತಾ ಎಂಬುವವರು ವೈ.ವಿ .ನೆಕ್ಸ್ಟ್ ಹೆಸರಿನ ತಮ್ಮ ಮನೆ ಒಳಗೊಂಡಂತೆ ಕಾರ್ ಶೆಡ್ ನಿರ್ಮಿಸಿಕೊಂಡಿದ್ದರು. ಅಲ್ಲದೆ ಇವರ ಮನೆ ಪಕ್ಕದಲ್ಲಿಯೇ ಮಹೇಶ್ ಎಂಬುವವರು ಸಹ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವುದು ಸರ್ವೇ ಕಾರ್ಯದಲ್ಲಿ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಎಸ್.ಎನ್.ನಾಗರಾಜು, ಪುರಸಭೆ ಕಂದಾಯ ಅಧಿಕಾರಿ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಮದ್ದೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಸುಮಾರು 40 ಮಂದಿ ಪೊಲೀಸರ ಬಿಗಿ ಬಂದೋಬಸ್ತಿನೊಂದಿಗೆ ರಕ್ಷಿತಾ ಮನೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದಾಗ ಆಕೆಯ ಪೋಷಕರು ಮತ್ತು ಬೆಂಬಲಿಗರು ತೆರವು ಕಾರ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.
ಒಂದು ಹಂತದಲ್ಲಿ ಮನೆ ಮಾಲೀಕಳಾದ ರಕ್ಷಿತಾ ಮತ್ತು ಆಕೆಯ ತಾಯಿ ಜೆಸಿಬಿ ಯಂತ್ರಗಳನ್ನು ತಡೆದು ರಂಪಾಟ ನಡೆಸಿದರು. ನಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಇಡೀ ಮನೆ ಸುತ್ತ ದಿಗ್ಬಂಧನ ವಿಧಿಸಿ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿದರು. ಶುಕ್ರವಾರವೂ ಸಹ ಅಕ್ರಮ ಒತ್ತುವರಿ ಮನೆಗಳ ತೆರವು ಕಾರ್ಯ ನಡೆಯಲಿದೆ ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.