ಸಾರಾಂಶ
ಗಜೇಂದ್ರಗಡ: ಸುಗಮ ಸಂಚಾರ ಹಿನ್ನೆಲೆ ಪಟ್ಟಣದ ಜೋಡು ರಸ್ತೆ, ದುರ್ಗಾ ವೃತ್ತ ಹಾಗೂ ಕೆ.ಕೆ. ವೃತ್ತ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲಿ ಹೂ, ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಪುರಸಭೆ ನಿರ್ಬಂಧ ಹೇರಿದ ಪರಿಣಾಮ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿನ ಬೀದಿ ಬದಿ ವ್ಯಾಪಾರ ಮಾಡುವರು ಪರದಾಡಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳ ರಸ್ತೆಯಲ್ಲಿ ನೂರಾರು ಬೀದಿ ಬದಿ ವ್ಯಾಪಾರಸ್ಥರು ಅವೈಜ್ಞಾನಿಕ ಮಾದರಿಯಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದ ಪರಿಣಾಮ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತದೆ ಎಂಬ ದೂರು ಕೇಳಿ ಬಂದಿದ್ದವು. ಹೀಗಾಗಿ ಸ್ಥಳೀಯ ಪುರಸಭೆಯಿಂದ ನಿಗದಿತ ರಸ್ತೆ ಹಾಗೂ ವೃತ್ತಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರಿದ ಪರಿಣಾಮ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ರೋಣ ರಸ್ತೆಯ ಎಪಿಎಂಸಿ ಹತ್ತಿರ ಬಯಲು ಜಾಗೆಯಲ್ಲಿ ತಾತ್ಕಾಲಿಕ ವ್ಯಾಪಾರ ವಹಿವಾಟಿಗೆ ಮುಂದಾಗಿದ್ದಾರೆ.ಪಟ್ಟಣದ ಕಾಲಕಾಲೇಶ್ವರ ವೃತ್ತ ಸುತ್ತಲಿನ ಪ್ರದೇಶದಲ್ಲಿನ ಬೀದಿ ಬದಿ ವ್ಯಾಪಾರಸ್ಥರನ್ನು ಈ ಹಿಂದೆ ತಾಲೂಕಾಡಳಿತದ ಆದೇಶದ ಹಿನ್ನಲೆಯಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಜಂಟಿಯಾಗಿ ತಹಸೀಲ್ದಾರ್ ಕಚೇರಿ ಎದುರು ಹಾಗೂ ರೋಣ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೇಬ್ಬಿಸಿದ್ದರು. ಹೀಗಾಗಿ ಅಧಿಕಾರಿಗಳ ವರ್ತನೆ ಖಂಡಿಸಿ ಪ್ರತಿಭಟನೆ ಸಹ ಜೋರಾಗಿ ನಡೆದಿತ್ತು. ಆದರೆ ದಿನ ಕಳೆದಂತೆ ತಹಸೀಲ್ದಾರ್ ಕಚೇರಿ ಸುತ್ತಲು ವ್ಯಾಪಾರ, ವಹಿವಾಟು ಎಂದಿನಂತೆ ಮತ್ತೆ ಆರಂಭವಾಗಿದ್ದ ಪರಿಣಾಮ ಕಾಲಕಾಲೇಶ್ವರ ವೃತ್ತದ ಸುತ್ತಲು ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಮುಂಜಾಗ್ರತ ಕ್ರಮ: ಪಟ್ಟಣದ ಜೋಡು ರಸ್ತೆ, ದುರ್ಗಾ ವೃತ್ತ, ಅಂಬೇಡ್ಕರ ವೃತ್ತ ಸೇರಿದಂತೆ ರೋಣ, ಕುಷ್ಟಗಿ ಹಾಗೂ ಬಸ್ ನಿಲ್ದಾಣ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡುವುದು ಎಂದರೆ ಜೇನುಗೂಡಿಗೆ ಕಲ್ಲೆಸೆದಂತೆ ಎಂದು ಅರ್ಥ ಮಾಡಿಕೊಂಡಿದ್ದ ಅಧಿಕಾರಿಗಳು ಮುಂಜಾಗ್ರತವಾಗಿ ಬೀಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ ಕೆಲವೆಡೆ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ವಾಗ್ವಾದ ನಡೆದಾಗ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುತ್ತಿದ್ದೇವೆ ಸಹಕರಿಸಿ ಎಂದು ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ಅನೇಕ ವರ್ಷಗಳಿಂದ ಪಟ್ಟಣದ ಜೋಡು ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಬೀದಿ ಬದಿಯಲ್ಲಿ ತರಕಾರಿ, ಹಣ್ಣಿನ ಅಂಗಡಿಗಳು ಮುಂತಾದ ವಿವಿಧ ಬಗೆಯ ವ್ಯಾಪಾರ ಮಾಡುತ್ತಿದ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದರಿಂದ ಪಟ್ಟಣದ ದುರ್ಗಾವೃತ್ತ, ಜೋಡುರಸ್ತೆ, ಕೆ.ಕೆ. ವೃತ್ತದಲ್ಲಿನ ರಸ್ತೆಗಳು ಈಗ ಬಿಕೋ ಎನ್ನುವಂತಾಗಿದೆ. ಹೂ,ಹಣ್ಣು ಅಥವಾ ಸಣ್ಣಪುಟ್ಟ ಸಾಮಗ್ರಿಗಳು ಬೇಕಾದರೆ ರೋಣ ರಸ್ತೆಯ ಎಪಿಎಂಸಿ ಹತ್ತಿರ ಬಯಲು ಜಾಗೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಈಗ ಸಾರ್ವಜನಿಕರಿಗೆ ಎದುರಾಗಿದೆ.ಹಲವು ವರ್ಷಗಳಿಂದ ಬೀದಿಬದಿಯಲ್ಲಿ ಹಣ್ಣು ಮತ್ತು ಹೂ,ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳ ಮಾರಾಟದೊಂದಿಗೆ ಜೀವನ ಸಾಗಿಸುತ್ತಿದ್ದೇವೆ. ಈಗ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಿದರೆ, ನಮ್ಮ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಹೀಗಾಗಿ ಪಟ್ಟಣದ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶಕೊಡಬೇಕು ಎಂಬುದು ಬೀದಿಬದಿ ವ್ಯಾಪಾರಿಗಳ ಅಳಲಾಗಿದ್ದು, ಸೋಮವಾರ ಸಂಜೆ ಟಿವಿಸಿ ಸದಸ್ಯರು, ಬೀದಿ ಬದಿ ವ್ಯಾಪಾರಸ್ಥರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು ಅಧಿಕಾರಿಗಳು ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ ಬೀದಿ ಬದಿ ವ್ಯಾಪಾರಸ್ಥರು ಗಜೇಂದ್ರಗಡ ಬಂದ್‌ಗೆ ಕರೆ ನೀಡಲು ಮುಂದಾಗಲಿದ್ದಾರೆ ಎನ್ನಲಾಗಿದೆ.
ಪಟ್ಟಣದ ರಸ್ತೆಗಳ ಬದಿಯಲ್ಲಿ ವರ್ತಕರು ವ್ಯಾಪಾರ ಮಾಡುತ್ತಿದ್ದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಶಾಲಾ ವಾಹನಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಪುರಸಭೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲು ಮುಂದಾದರು. ಈಗ ಪ್ರಮುಖ ರಸ್ತೆಗಳು ವಿಶಾಲವಾಗಿರುವುದರಿಂದ ವಾಹನ ಸವಾರರಿಗೆ,ಪಾದಚಾರಿಗಳಿಗೆ ಅನುಕೂಲವಾದಂತಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.