ಸಾರಾಂಶ
ಗಜೇಂದ್ರಗಡ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸುತ್ತ ಮುತ್ತಲಿನ ಅನಧಿಕೃತ ಡಬ್ಬಾ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಭಾನವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದರು.
ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸುತ್ತ ಮುತ್ತಲಿನ ಅನಧಿಕೃತ ಡಬ್ಬಾ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಭಾನುವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದರು.ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿದ್ದರಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಸುತ್ತಮುತ್ತಲಿನ ಸುಮಾರು ೩೪ಕ್ಕೂ ಹೆಚ್ಚು ಅಂಗಡಿಗಳು ಇದ್ದು ಅವುಗಳನ್ನು ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ತೆರವು ಮಾಡಲಾಯಿತು. ಪುರಸಭೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಗಡುವು ನೀಡಿದ್ದರು. ಹೀಗಾಗಿ ಪೊಲೀಸರ ಸಹಕಾರದೊಂದಿಗೆ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆಯಲ್ಲಿ ಕೆಲ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಡಬ್ಬಾ ಅಂಗಡಿಗಳನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತೇವೆ, ಹಲವಾರು ಜನ ಕೆಲಸ ಮಾಡುತ್ತಿದ್ದಾರೆ ಅವರ ಪಾಡೇನು ಎಂದು ಮಾಲೀಕರು ಪ್ರಶ್ನಿಸಿದರು. ತೆರವು ಕಾರ್ಯಾಚರಣೆ ವೇಳೆಯಲ್ಲಿ ವ್ಯಾಪಾರಸ್ಥರ ಮಧ್ಯ ವಾಗ್ವಾದ, ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಲ ಅಂಗಡಿ ಮಾಲೀಕರು ತಾವಾಗಿಯೇ ಅಂಗಡಿಯ ತೆರವು ಕಾರ್ಯದಲ್ಲಿ ಮುಂದಾದರು, ಕೆಲ ಅಂಗಡಿಗಳನ್ನು ಪುರಸಭೆ ಜೆಸಿಬಿಯಿಂದ ತೆರವು ಕಾರ್ಯ ಕೈಗೊಳ್ಳಲಾಯಿತು.ಈ ಕುರಿತು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಪಟ್ಟಣದ ಹಾಗೂ ಗ್ರಾಮದ ಜನತೆ ನಿತ್ಯ ಕಚೇರಿಗೆ ತಮ್ಮ ಕೆಲಸಕ್ಕೆ ಬರುತ್ತಿದ್ದು. ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಬಸ್ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಅನಧಿಕೃತ ಅಂಗಡಿಗಳನ್ನು ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದರು.ಸ್ಥಳೀಯ ಪಿಎಸ್‌ಐ ಸೋಮನಗೌಡ ಗೌಡರ ಹಾಗೂ ರಾಘವೇಂದ್ರ ಮಂತಾ, ಶಿವಕುಮಾರ ಇಲಾಳ ಸೇರಿದಂತೆ ಪುರಸಭೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ವೇಳೆಯಲ್ಲಿ ಇದ್ದರು.