ಮೆಗಾ ಮಾರುಕಟ್ಟೆ ಆವರಣಗೋಡೆ ತೆರವು

| Published : Jul 26 2024, 01:40 AM IST

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾ ಮಾರುಕಟ್ಟೆ ಕಟ್ಟಡದ ಕೊಲ್ಹಾರಕ್ಕೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಆವರಣಗೋಡೆ(ಕಾಂಪೌಂಡ್)ಯನ್ನು ತೆರವು ಗೊಳಿಸುವ ಕಾರ್ಯಾಚರಣೆ ಪೊಲೀಸ್ ಭದ್ರತೆಯಲ್ಲಿ ಪುರಸಭೆಯಿಂದ ಗುರುವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾ ಮಾರುಕಟ್ಟೆ ಕಟ್ಟಡದ ಕೊಲ್ಹಾರಕ್ಕೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಆವರಣಗೋಡೆ(ಕಾಂಪೌಂಡ್)ಯನ್ನು ತೆರವು ಗೊಳಿಸುವ ಕಾರ್ಯಾಚರಣೆ ಪೊಲೀಸ್ ಭದ್ರತೆಯಲ್ಲಿ ಪುರಸಭೆಯಿಂದ ಗುರುವಾರ ನಡೆಸಲಾಯಿತು.

ಆವರಣಗೋಡೆಗೆ ಹೊಂದಿಕೊಂಡು ಹಾಕಲಾಗಿದ್ದ ಡಬ್ಬಾ ಅಂಗಡಿಗಳನ್ನು ಪುರಸಭೆಯಿಂದ ಮೊದಲು ತೆರವು ಗೊಳಿಸಿದ ನಂತರ ಜೆಸಿಬಿಯಿಂದ ಆವರಣಗೋಡೆಯನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಆವರಣಗೋಡೆಗೆ ಇಟ್ಟಿದ್ದ ಡಬ್ಬಾ ಅಂಗಡಿಗಳ ವ್ಯಾಪಾರಿಗಳು ನಮ್ಮ ನಿತ್ಯ ಜೀವನ ಇದರಿಂದ ನಡೆಯುತ್ತಿದೆ. ಅಧಿಕಾರಿಗಳು ನಮ್ಮ ಬಗ್ಗೆ ಗಮನ ಹರಿಸಬೇಕು. ನಮ್ಮ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುವ ಜೊತೆಗೆ ಅಧಿಕಾರಿಗಳೊಂದಿಗೆ ಮಾತಿನ ವಾಗ್ವಾದ ನಡೆಯಿತು. ಮೆಗಾ ಮಾರುಕಟ್ಟೆಯಲ್ಲಿ ಬಾಡಿಗೆ ಹಿಡಿದ ಅಂಗಡಿ ಮಾಲೀಕರು ಪುರಸಭೆ ಮುಖ್ಯಾಧಿಕಾರಿಗಳಿಗೆ ಕೊಲ್ಹಾರ ರಸ್ತೆಗೆ ಹೊಂದಿಕೊಂಡಿರುವ ಆವರಣಗೋಡೆಯನ್ನು ತೆರವು ಗೊಳಿಸಿ ನಮ್ಮ ಅಂಗಡಿಗಳಿಗೆ ಜನರು ಬರುವಂತೆ ಅನುಕೂಲ ಮಾಡಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬುಧವಾರವಷ್ಟೇ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೆಯಲ್ಲಿಯೇ ಇಂದು ತಾತ್ಕಾಲಿಕವಾಗಿ ಕಟ್ಟಲಾಗಿದ್ದ ಆವರಣಗೋಡೆಯ ತೆರವು ಕಾರ್ಯಾಚರಣೆಯನ್ನು ಪುರಸಭೆಯಿಂದ ನಡೆದಿದೆ. ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಕನ್ನಡಪ್ರಭದೊಂದಿಗೆ ಮಾತನಾಡಿ, ಮೆಗಾಮಾರುಕಟ್ಟೆಯ ಕೊಲ್ಹಾರ ರಸ್ತೆಯ ಪಕ್ಕದಲ್ಲಿ ತಾತ್ಕಲಿಕವಾಗಿ ನಿರ್ಮಿಸಲಾಗಿದ್ದ ಆವರಣಗೋಡೆಯನ್ನು ತೆರವು ಗೊಳಿಸಿ ೧೫ನೇ ಹಣಕಾಸು ಯೋಜನೆಯಲ್ಲಿ ₹೪೪ ಲಕ್ಷ ವೆಚ್ಚದಲ್ಲಿ ಗ್ರಿಲ್ ಅಳವಡಿಸುವ ಕಾಮಗಾರಿಯನ್ನು ಪುರಸಭೆಯಿಂದ ಹಾಕಿಕೊಳ್ಳಲಾಗಿದೆ. ಈಗಾಗಲೇ ಇದರ ಟೆಂಡರ್ ಆಗಿದೆ. ಒಂದು ವಾರದಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಆವರಣ ಗೋಡೆಯನ್ನು ತೆಗೆದು ಗ್ರಿಲ್ ಅಳವಡಿಸಿದರೆ ಮೆಗಾ ಮಾರುಕಟ್ಟೆಯಲ್ಲಿರುವ ಅಂಗಡಿ-ಮಳಿಗೆಗಳು ಜನರಿಗೆ ಕಾಣುವ ಜೊತೆಗೆ ಮೆಗಾಮಾರುಕಟ್ಟೆಗೆ ಮೆರಗು ಬರಲಿದೆ. ಮೆಗಾ ಮಾರುಕಟ್ಟೆಯಲ್ಲಿರುವ ಅಂಗಡಿಗಳ ವ್ಯಾಪಾರ-ವಹಿವಾಟುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಅಳಲು ತೊಡಿಕೊಂಡ ಡಬ್ಬಾ ಅಂಗಡಿಯವರು:

ಆವರಣಗೋಡೆಗೆ ಹೊಂದಿಕೊಂಡು ಹಾಕಲಾಗಿದ್ದ ಡಬ್ಬಾ ಅಂಗಡಿಯವರು ತಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ನಾವು ಜೀವನ ನಡೆಸುವುದು ಕಷ್ಟವಾಗುತ್ತದೆ. ಈ ವ್ಯಾಪಾರದಿಂದ ನಮ್ಮ ಜೀವನ ನಿರ್ವಹಣೆಯಾಗುತ್ತಿತ್ತು. ಅಧಿಕಾರಿಗಳು ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ನಾವು ಮುಂದೆ ಏನು ಮಾಡಬೇಕೆಂಬುವುದು ತೋಚದಂತದಾಗಿದೆ. ನಮಗೆ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡುವವರೆಗೆ ನಾವು ಮೆಗಾ ಮಾರುಕಟ್ಟೆಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಸಲೀಮಾ ಬಾಗವಾನ, ಗಿಡ್ಡಪ್ಪ ಕಾಸರ, ಫಕೀರ ಬಾಗವಾನ, ಶಿವಾನಂದ ಮಾದರ, ಮಹಿಬೂಬ್‌ ಜೀರಗಾಳ, ರಮೇಶ ಚಿಮ್ಮಲಗಿ, ಡೊಂಗ್ರಮ ಬೈರವಾಡಗಿ, ಶಂಕರಯ್ಯ ಹಿರೇಮಠ, ರೇಷ್ಮಾ ಆಲಮೇಲ, ಜನಾಬಿ ಗಿಡ್ಡಪ್ಪ ಕಸರ, ಶ್ಯಾಮಶ್ಯಾದ ಮನ್ಯಾರ, ಜಾಕೀರ್‌ ನದಾಫ, ರಾಜಅಹ್ಮದ್ ದಳವಾಯಿ ಎಂದು ತಮ್ಮ ಅಳಲು ತೋಡಿಕೊಂಡರು.ಈ ಆವರಣಗೋಡೆಗೆ ಹೊಂದಿಕೊಂಡು ಹಾಕಲಾಗಿದ್ದ ಡಬ್ಬಾ ಅಂಗಡಿಗಳ ಮಾಲೀಕರಿಗೆ ತಮ್ಮ ಅಂಗಡಿಗಳನ್ನು ತೆರವು ಗೊಳಿಸಿಕೊಳ್ಳಲು ಒಂದೆರಡು ದಿನಗಳ ಮುಂಚೆ ಪುರಸಭೆಯಿಂದ ತಿಳಿಸಲಾಗಿತ್ತು. ಕೆಲವರು ತಮ್ಮ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿಕೊಂಡಿದ್ದಾರೆ. ಇಂದು ಕೆಲವು ಅಂಗಡಿಗಳನ್ನು ಪುರಸಭೆಯಿಂದ ತೆರವುಗೊಳಿಸಿ ಆವರಣಗೋಡೆಯ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಕಾಯಂಯಾಗಿ ಅಂಗಡಿಗಳನ್ನು ಹಾಕುವಂತಿಲ್ಲ. ಅವರು ತಮ್ಮ ವ್ಯಾಪಾರವನ್ನು ತಳ್ಳು ಗಾಡಿಯಲ್ಲಿ ಮಾಡಬಹುದು.

-ಎಚ್.ಎಸ್.ಚಿತ್ತರಗಿ,

ಪುರಸಭೆ ಮುಖ್ಯಾಧಿಕಾರಿ.ಏಕಾಏಕಿ ನಮ್ಮ ಅಂಗಡಿಯನ್ನು ತೆರವುಗೊಳಿಸಿದ್ದರಿಂದ ನಮ್ಮ ಮಾಲು ಹಾಳಾಗಿ ಹೋಗಿದೆ. ನಮಗೆ ಬಸವೇಶ್ವರ ಜಾತ್ರೆಯವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬೇಕಿತ್ತು. ನಮಗೆ ಅಂಗಡಿ ತೆರವು ಗೊಳಿಸಲು ಅವಕಾಶ ಕೊಡಬೇಕಾಗಿತ್ತು. ಈಗ ನಮ್ಮ ಜೀವನ ನಿರ್ವಹಣೆ ಹೇಗೆ ಮಾಡಬೇಕೆಂಬುವುದು ತೋಚದಂತಾಗಿದೆ. ನಮಗೆ ವ್ಯಾಪಾರ ಮಾಡಿಕೊಳ್ಳಲು ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು.

-ಯಾಸೀನ್‌ ಗೊಳಸಂಗಿ,
ಬಳೆ ಅಂಗಡಿ ವ್ಯಾಪಾರಸ್ಥ.ಪುರಸಭೆ ಮುಖ್ಯಾಧಿಕಾರಿಗಳು ಬೀದಿ ವ್ಯಾಪಾರಸ್ಥರ ಸಭೆ ಕರೆದು ಅಂಗಡಿ ತೆರವು ಗೊಳಿಸುವ ಬಗ್ಗೆ ಮಾಹಿತಿ ನೀಡಬೇಕಾಗಿತ್ತು. ಅಧಿಕಾರಿಗಳು ಬೀದಿ ವ್ಯಾಪಾರಸ್ಥರ ಹಿತರಕ್ಷಣೆ ಕಾಪಾಡದೇ ಈ ರೀತಿ ಮಾಡಿರುವುದು ಸರಿಯಲ್ಲ. ಬೀದಿ ವ್ಯಾಪಾರಸ್ಥರ ಹಿತರಕ್ಷಣೆ ಕಾಯ್ದುಕೊಳ್ಳುವದು ಅಧಿಕಾರಿಗಳ ಕರ್ತವ್ಯವಾಗಿದೆ.

-ಜಾಕೀರ ನದಾಫ್,

ಬೀದಿ ವ್ಯಾಪಾಸ್ಥರ ಪಟ್ಟಣ ಸಮಿತಿ ಸದಸ್ಯ.