ಕಾವೇರಿ ನದಿಗೆ ಸುರಿದ ತ್ಯಾಜ್ಯ ತೆರವು

| Published : Mar 12 2024, 02:00 AM IST

ಸಾರಾಂಶ

ಕಾವೇರಿ ನದಿಗೆ ಸುರಿದ ತ್ಯಾಜ್ಯವನ್ನು ಅವರಿಂದಲೇ ತೆರವುಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಬೆಂಗಳೂರಿನಿಂದ ಬಂದ ಪ್ರವಾಸಿಗರು ಕುಶಾಲನಗರದಲ್ಲಿ ಕಾವೇರಿ ನದಿಗೆ ಸುರಿದ ತ್ಯಾಜ್ಯವನ್ನು ಸ್ಥಳೀಯ ಪರಿಸರ ಪ್ರೇಮಿಗಳು ಅವರಿಂದಲೇ ತೆರವು ಮಾಡಿಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನ ಪ್ರವಾಸಿಗರು ಟಿಟಿ ವಾಹನದಲ್ಲಿ ಕುಶಾಲ ನಗರ ಕಡೆಯಿಂದ ಬೆಳಗ್ಗೆ ಏಳು ಗಂಟೆ ವೇಳೆಗೆ ತೆರಳುತ್ತಿದ್ದ ಸಂದರ್ಭ ಕಾವೇರಿ ನದಿ ಸೇತುವೆ ಮೇಲ್ಭಾಗದಿಂದ ಚೀಲ ಒಂದರಿಂದ ಭಾರಿ ಪ್ರಮಾಣದ ತ್ಯಾಜ್ಯಗಳನ್ನು ನದಿಗೆ ಸುರಿದ ದೃಶ್ಯ ವಾಯು ವಿಹಾರಕ್ಕೆ ತೆರಳುತ್ತಿದ್ದ ಸಂದರ್ಭ ಕಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಚಂದ್ರಮೋಹನ್ ಮತ್ತು ಅವರ ಪತ್ನಿ ವನಿತಾ ಚಂದ್ರಮೋಹನ್ ತ್ಯಾಜ್ಯ ಸುರಿದ ವಾಹನವನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ವಾಹನದೊಂದಿಗೆ ಆಗಂತಕರು ಸ್ಥಳದಿಂದ ಪರಾರಿ ಯಾಗುವಲ್ಲಿ ಯಶಸ್ವಿಯಾಗಿದ್ದಾರೆ.ನದಿಯಲ್ಲಿ ಕಂಡುಬಂದ ತ್ಯಾಜ್ಯದ ರಾಶಿಯ ನಡುವೆ ಆಹ್ವಾನ ಪತ್ರಿಕೆಯಲ್ಲಿ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಪತ್ತೆ ಹಚ್ಚಿ ಕಸ ಸುರಿದವರನ್ನು ನದಿ ತಟಕ್ಕೆ ಕರೆಸಿ ಅವರ ಮೂಲಕ ನದಿಗೆ ಸುರಿದ ಒಂದು ಚೀಲದ ಪ್ರಮಾಣದ ನೂರಾರು ಸಂಖ್ಯೆಯ ವಿವಾಹ ಆಮಂತ್ರಣ ಪತ್ರಿಕೆ ಗಳನ್ನು ನದಿಯಿಂದ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬಡಾವಣೆಯ ನಿವಾಸಿ ಮುಕುಂದರಾಜು ಎಂಬವರು ತಮ್ಮ ಪುತ್ರನ ವಿವಾಹ ಸಂದರ್ಭ ಉಳಿದ ಆಮಂತ್ರಣ ಪತ್ರಿಕೆಗಳನ್ನು ಅರ್ಚಕರ ಸಲಹೆಯಂತೆ ಶಾಸ್ತ್ರೋಕ್ತವಾಗಿ ಕಾವೇರಿ ನದಿಗೆ ಸುರಿಯಲು ಬಂದಿರುವುದಾಗಿ ಈ ವೇಳೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ನದಿಯ ಪ್ರಸಕ್ತ ಸ್ಥಿತಿ ಮತ್ತು ಜಾಗೃತಿ ಬಗ್ಗೆ ತಿಳಿದ ಮುಕುಂದರಾಜು ಮತ್ತು ಕುಟುಂಬ ಸದಸ್ಯರು ತಕ್ಷಣ ನದಿಯಲ್ಲಿ ತಾವು ಸುರಿದ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿ ತೆರವು ಗೊಳಿಸಿದರು .