ಉಪ್ಪಿನಂಗಡಿ: ಗುಡ್ಡಗಾಡು ಓಟ ಸ್ಪರ್ಧೆಯಿಂದ ರಾಶಿಬಿದ್ದಿದ್ದ ತ್ಯಾಜ್ಯಗಳ ತೆರವು

| Published : Nov 22 2024, 01:18 AM IST

ಉಪ್ಪಿನಂಗಡಿ: ಗುಡ್ಡಗಾಡು ಓಟ ಸ್ಪರ್ಧೆಯಿಂದ ರಾಶಿಬಿದ್ದಿದ್ದ ತ್ಯಾಜ್ಯಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಗುಡ್ದಗಾಡು ಓಟದ ಮಾರ್ಗದುದ್ದಕ್ಕೂ ಸ್ಪರ್ಧಿಗಳಿಗೆ ನೀರಿನ ಬಾಟಲಿ, ಐಸ್, ಸ್ಪಾಂಜ್‌ಗಳನ್ನು ಒದಗಿಸಲಾಗಿತ್ತು. ಸ್ಪರ್ಧಿಗಳು ಉಪಯೋಗಿಸಿ ಬಿಸಾಡಿದ ವಸ್ತುಗಳು ಮಾರ್ಗದುದ್ದಕ್ಕೂ ಇರುವುದನ್ನು ಕಂಡ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿಗಳೊಡಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಅದ್ಧೂರಿಯಾಗಿ ನಡೆದ ರಾಷ್ಟ್ರಮಟ್ಟದ ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯ ಬಳಿಕ ಸ್ಪರ್ಧೆ ನಡೆದ ಬೀದಿಯುದ್ದಕ್ಕೂ ಎಸೆಯಲ್ಪಟ್ಟಿದ್ದ ಕಸಕಡ್ಡಿಗಳನ್ನು ಗುರುವಾರದಂದು ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಬಿಯಾನದಡಿ ತೆರವುಮಾಡಿ ಸ್ವಚ್ಛಗೊಳಿಸಿದರು.

ಗುಡ್ದಗಾಡು ಓಟದ ಮಾರ್ಗದುದ್ದಕ್ಕೂ ಸ್ಪರ್ಧಿಗಳಿಗೆ ನೀರಿನ ಬಾಟಲಿ, ಐಸ್, ಸ್ಪಾಂಜ್‌ಗಳನ್ನು ಒದಗಿಸಲಾಗಿತ್ತು. ಸ್ಪರ್ಧಿಗಳು ಉಪಯೋಗಿಸಿ ಬಿಸಾಡಿದ ವಸ್ತುಗಳು ಮಾರ್ಗದುದ್ದಕ್ಕೂ ಇರುವುದನ್ನು ಕಂಡ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ವಿದ್ಯಾರ್ಥಿಗಳೊಡಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಲ್ಲದೆ ಸ್ಪರ್ಧಿಗಳು ವಾಸ್ತವ್ಯ ಹೂಡಿದ್ದ ಎಲ್ಲ ವಿದ್ಯಾಸಂಸ್ಥೆಗಳ ಶೌಚಾಲಯ ಮತ್ತು ಸ್ನಾನಗೃಹಗಳ ಸ್ವಚ್ಛತೆ ಹಾಗೂ ಕ್ರಿಮಿನಾಶಕಗಳ ಸಿಂಪಡಣೆಯನ್ನು ಪಂಚಾಯಿತಿ ಆಡಳಿತದ ಸಹಕಾರದೊಂದಿಗೆ ನಡೆಸಿದರು.

ಅಸ್ವಸ್ಥ ಎಲ್ಲ ಸ್ಪರ್ಧಿಗಳು ಚೇತರಿಕೆ: ಗುಡ್ದಗಾಡು ಓಟದ ವೇಳೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅಸ್ವಸ್ಥರಾಗಿದ್ದ ಹಲವಾರು ವಿದ್ಯಾರ್ಥಿಗಳಿಗೆ ಉಪ್ಪಿನಂಗಡಿ ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಎಲ್ಲ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಗುಡ್ಡಗಾಡು ಕ್ರೀಡಾಕೂಟವೊಂದನ್ನು ಆಯೋಜಿಸಿ ಗಮನ ಸೆಳೆದಿರಲು ಮುಖ್ಯ ಕಾರಣ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಡಮಾರ ಅವರ ಆಸಕ್ತಿ. ಊರಿನ ಸಮಸ್ತರ ಸಹಕಾರದೊಂದಿಗೆ ಉಪ್ಪಿನಂಗಡಿಯಂತಹ ಸಣ್ಣ ಊರಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವಲ್ಲಿ ಇವರ ಕಾರ್ಯ ಗಮನಾರ್ಹವಾದುದು.