ಕನ್ನಡಪ್ರಭ ವಾರ್ತೆ ಪಾಂಡವಪುರ

ಮನುಷ್ಯರ ದುರಾಸೆಯಿಂದ ಪರಿಸರ ನಾಶದಿಂದ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿದ್ದು, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಹೇಳಿದರು.

ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಹಾಗೂ ಪರಿಸರ ದಿನಾಚರಯಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮನುಷ್ಯ ತಮ್ಮ ನಗರೀಕರಣ, ಭೋಗ ಜೀವನಕ್ಕಾಗಿ ಅರಣ್ಯವನ್ನು ನಾಶ ಪಡಿಸುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ನಾಶದಿಂದ ಹಲವು ವೈರಪರೀತ್ಯಗಳು ಸಂಭವಿಸುತ್ತಿವೆ. ಇದರಿಂದ ಸಮಯಕ್ಕೆ ಮಳೆ, ಬೆಳೆಯಾಗುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡಬೇಕು. ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವ ಕಡೆಗೆ ಪೋಷಕರು ಮುಂದಾಗಬೇಕು ಎಂದರು.

ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸುವ ಹಲವು ಮೌಲ್ಯಯುತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.


ರಾಗಿಮುದ್ದನಹಳ್ಳಿ ನಾಗೇಶ್ ಮಾತನಾಡಿ, ಪ್ರತಿಯೊಬ್ಬರು ಪರಿಸರದ ಬಗ್ಗೆ ಜಾಗೃತಗೊಂಡು ಹುಟ್ಟುಹಬ್ಬದ ಸಂಭ್ರಮಾಚರಣೆಗಳಲ್ಲಿ ಕೇಕ್ ಕತ್ತರಿಸುವ ಬದಲು ಒಂದೊಂದು ಮರಗಳನ್ನು ನೆಟ್ಟು ಪರಿಸರ ಬೆಳೆಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಕ್ಕಳಿಗೆ ಪೋಷಕರಿಂದ ಅಕ್ಷರಾಭ್ಯಾಸ ನಡೆಸಲಾಯಿತು. ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಪ್ರಾಂಶುಪಾಲರಾದ ಚಿದಂಬರ್, ಡಿ.ಆರ್.ಪ್ರಸಾದೇಗೌಡ, ಮುಖ್ಯಶಿಕ್ಷಕರಾದ ಶಶಿಕಲಾ, ಅಶ್ವಿನಿ, ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಮಾದೇಗೌಡ, ಎನ್.ಕೃಷ್ಣೇಗೌಡ, ಪುಟ್ಟೇಗೌಡ, ಎಸ್.ನಾಗಸುಂದರ್, ಎಸ್.ರವಿಕುಮಾರ್, ಮಧುಸೂದನ್ ಸೇರಿದಂತೆ ಹಲವರು ಹಾಜರಿದ್ದರು.ರಾಷ್ಟ್ರೀಯ ತಂಬಾಕು ನಿಯಂತ್ರಣ ಕುರಿತು ಸಮನ್ವಯ ಸಮಿತಿ ಸಭೆಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ.ಅಶೋಕ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕುರಿತು ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಚರ್ಚಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ಮಾತನಾಡಿ, ತಾಲೂಕಿನ 394 ಶಾಲಾ, ಕಾಲೇಜುಗಳು, 400 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಚೇರಿಗಳಿವೆ. ಅವುಗಳಿಂದ 100 ಮೀಟರ್ ಅಂತರದ ನಂತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಎಂದರು.ಈ ನಿಯಮ ಉಲ್ಲಂಘಿಸಿದರೆ ಅಂಗಡಿಗಳಿಗೆ ದಂಡ ವಿಧಿಸಿ ಕೇಸ್ ದಾಖಲಿಸಲಾಗುವುದು. ಪುರಸಭೆ ಮತ್ತು ಗ್ರಾಪಂಗಳಲ್ಲಿ ಅಂಗಡಿ ಹೋಟೆಲ್ ಬೇಕರಿಗಳಿಗೆ ಪರವಾನಿಗೆ ಕೊಡುವಾಗ ಈ ಮಾಹಿತಿ ನೀಡಿ ಕಡ್ಡಾಯವಾಗಿ ಪಾಲಿಸಲು ತಿಳಿಸಿದರು.

ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳಿಂದ ಆಗುವ ಮಾರಾಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಸಕ್ಕರೆ ಕಾಯಿಲೆ ರಕ್ತದ ಒತ್ತಡ ಚರ್ಮದ ಕಾಯಿಲೆ, ಮಾನಸಿಕ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದರು.ತಾಲೂಕು ದಂಡಾಧಿಕಾರಿ ಡಾ.ಅಶೋಕ್ ಮಾತನಾಡಿ, ಹೋಬಳಿಗೆ ಒಂದರಂತೆ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಅಧಿಕಾರಿಗಳು ನೌಕರರು ಸಹಕಾರ ನೀಡುವಂತೆ ಕೋರಿದರು.

ಸಭೆಯಲ್ಲಿ ಬಿಸಿಎಂ ಅಧಿಕಾರಿ ವೆಂಕಟೇಶ್, ಶಿಕ್ಷಣ ಇಲಾಖೆ ಅಧಿಕಾರಿ ಪ್ರಭು ಕುಮಾರ್, ಆಯುಷ್ ಇಲಾಖೆ ಡಾ.ಸುಬ್ರಹ್ಮಣ್ಯ, ಪುರಸಭೆ, ಆರೋಗ್ಯ ಇಲಾಖೆಯ ಡಾ.ಶಶಿಕಾಂತ್, ಸತೀಶ್, ವಿನಯ್, ಜ್ಯೋತಿ ಭಾಗವಹಿಸಿದ್ದರು.