ಹವಾಮಾನ ಬದಲಾವಣೆ ದುರ್ಬಲ ವರ್ಗಗಳಿಗೆ ಸವಾಲು: ಡಾ.ಸನ್ನಿ

| Published : May 05 2025, 12:47 AM IST

ಸಾರಾಂಶ

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ಪರಿಸರ ಕಾನೂನು, ಶಿಕ್ಷಣ, ಸಂಶೋಧನಾ ಕೇಂದ್ರ ಹಾಗೂ ಕೇರಳ ಲಾ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ‘ತಾಪಮಾನ ಹೆಚ್ಚಾಗುತ್ತಿರುವ ಜಗತ್ತಿನಲ್ಲಿ ಹವಾಮಾನ ನ್ಯಾಯ: ಕಾನೂನು ಕ್ರಿಯೆ ಮತ್ತು ತಂತ್ರಜ್ಞಾನದಲ್ಲಿ ವಿಕಸನಗೊಳ್ಳುತ್ತಿರುವ ಮಾದರಿಗಳು’ ಎಂಬ ವಿಷಯದ ಮೇಲಿನ ಅಂತರ ರಾಷ್ಟ್ರೀಯ ಸೆಮಿನಾರ್‌ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಹವಾಮಾನ ವೈಪರೀತ್ಯದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಭಾರಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದ್ದರಿಂದ ಹವಾಮಾನ ಬದಲಾವಣೆಯಿಂದ ದುರ್ಬಲ ವರ್ಗಗಳಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಯೋಚಿಸುವ ಮತ್ತು ಇವುಗಳಿಗೆ ಸೂಕ್ತ ನೀತಿಗಳನ್ನು ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ ಎಂದು ತಿರುವನಂತಪುರದ ಕೇರಳ ಲಾ ಅಕಾಡೆಮಿಯ ನಿರ್ದೇಶಕ ಡಾ. ಕೆ.ಸಿ.ಸನ್ನಿ ಹೇಳಿದರು.ಅವರು ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ಪರಿಸರ ಕಾನೂನು, ಶಿಕ್ಷಣ, ಸಂಶೋಧನಾ ಕೇಂದ್ರ ಹಾಗೂ ಕೇರಳ ಲಾ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ‘ತಾಪಮಾನ ಹೆಚ್ಚಾಗುತ್ತಿರುವ ಜಗತ್ತಿನಲ್ಲಿ ಹವಾಮಾನ ನ್ಯಾಯ: ಕಾನೂನು ಕ್ರಿಯೆ ಮತ್ತು ತಂತ್ರಜ್ಞಾನದಲ್ಲಿ ವಿಕಸನಗೊಳ್ಳುತ್ತಿರುವ ಮಾದರಿಗಳು’ ಎಂಬ ವಿಷಯದ ಮೇಲಿನ ಅಂತರ ರಾಷ್ಟ್ರೀಯ ಸೆಮಿನಾರನ್ನು ಉದ್ಘಾಟಿಸಿ ಮಾತನಾಡಿದರು.ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ಪರಿಸರ ಕಾನೂನು, ಶಿಕ್ಷಣ, ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಾಯಿರಾಮ್ ಭಟ್ ದಿಕ್ಸೂಚಿ ಭಾಷಣ ಮಾಡುತ್ತಾ ಹವಾಮಾನ ಬದಲಾವಣೆ ಹಠಾತ್ ಬದಲಾವಣೆಯಲ್ಲ, ಇದು ೩೦ ವರ್ಷಗಳ ಸರಾಸರಿ ಬದಲಾವಣೆಯಾಗಿದ್ದು, ಮಾನವನ ಚಟುವಟಿಕೆಗಳಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಕೇವಲ ಮಾನವರಲ್ಲದೇ ಪ್ರಾಣಿಗಳು, ಜೀವ ಸಂಕುಲಗಳು ಹಾಗೂ ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು ಇದರಿಂದಾಗುವ ಅನಾಹುತಗಳಿಗೆ ಹಾಗೂ ಮಾಲಿನ್ಯಕ್ಕೆ ಕಾರ್ಪೋರೇಟ್ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವ ಜವಾಬ್ದಾರಿ ಯುವ ವಕೀಲರ ಮೇಲಿದೆ ಎಂದು ಹೇಳಿದರು.ಈ ಸೆಮಿನಾರ್‌ನಲ್ಲಿ ಇಸ್ರೋದ ಹಿರಿಯ ವಿಜ್ಞಾನಿ ಯೋಗೇಶ್ ಕುಮಾರ್ ಭಾವಸಾರ, ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್‌ನ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಜಾನ್ ಕೊಲ್ಟಾಜ್, ಪರಿಸರ ಸಂಬಂಧಿ ಬೆಂಗಳೂರಿನ ವಕೀಲರಾದ ಗಾಯತ್ರಿ ಗಿರೀಶ್‌ ಮತ್ತು ಜೈಬತ್ರು ಗಿರೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪರಿಸರ ಸಂರಕ್ಷಣೆ ಸಂಬಂಧಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಈ ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುಮಾರು ೬೦ ಜನ ಕಾನೂನು ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಕೀಲರು, ಸಂಶೋಧಕರು ತಮ್ಮ ಸಂಶೋಧನಾ ಪ್ರಂಬಂಧವನ್ನು ಮಂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕಿ ಡಾ. ನಿರ್ಮಲಾ ಕುಮಾರಿ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ರಘುನಾಥ್ ಕೆ.ಎಸ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಈರಪ್ಪ ಎಸ್. ಮೇದಾರ್ ವಂದಿಸಿದರು. ಡಾ.ಜಯಮೋಲ್ ಪಿ.ಎಸ್. ಕಾರ್ಯಕ್ರಮ ಸಂಯೋಜಿಸಿದರು. ವಾಸುದೇವ್ ತಿಲಕ್ ನಿರೂಪಿಸಿದರು.