ಮುಡಾ ಪ್ರಕರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಬಗ್ಗೆ ಕೋರ್ಟಲ್ಲಿ ನಾಳೆ ಕ್ಲೈಮ್ಯಾಕ್ಸ್‌?

| Published : Aug 30 2024, 01:08 AM IST / Updated: Aug 30 2024, 06:21 AM IST

ಮುಡಾ ಪ್ರಕರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಬಗ್ಗೆ ಕೋರ್ಟಲ್ಲಿ ನಾಳೆ ಕ್ಲೈಮ್ಯಾಕ್ಸ್‌?
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ (ಆ.31) ಮುಂದೂಡಿರುವ ಹೈಕೋರ್ಟ್‌ 

 ಬೆಂಗಳೂರು :  ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ (ಆ.31) ಮುಂದೂಡಿರುವ ಹೈಕೋರ್ಟ್‌, ಅಲ್ಲಿಯವರೆಗೆ ಪ್ರಾಸಿಕ್ಯೂಷನ್‌ ಆಧರಿಸಿ ಆತುರದ ಕ್ರಮ ಕೈಗೊಳ್ಳಬಾರದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ಸಿದ್ದರಾಮಯ್ಯ ಪರ ವಕೀಲರು ಸದ್ಯದ ಮಟ್ಟಿಗೆ ತಮ್ಮ ವಾದ ಮುಕ್ತಾಯಗೊಳಿಸಿದರೆ, ರಾಜ್ಯಪಾಲರ ಕಚೇರಿ ಹಾಗೂ ಖಾಸಗಿ ದೂರುದಾರರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿ ವಿಚಾರಣೆಯನ್ನು ಶನಿವಾರ ಬೆಳಗ್ಗೆ 10.30ಕ್ಕೆ ಮುಂದೂಡಿತು.

ಇದೇ ವೇಳೆ ಪ್ರಾಸಿಕ್ಯೂಷನ್‌ ಆಧರಿಸಿ ಆತುರದ ಕ್ರಮ ಕೈಗೊಳ್ಳಬಾರದು. ಪ್ರಕರಣ ಕುರಿತು ಸಿಬಿಐ ಅಥವಾ ಮತ್ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ದಾಖಲಿಸಿರುವ ದೂರಿನ ಕುರಿತ ತೀರ್ಪನ್ನು ಮುಂದೂಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿ ಆ.19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಶನಿವಾರದವರೆಗೆ ವಿಸ್ತರಿಸಿತು.

ಸುಮಾರು ಒಂದೂವರೆ ಗಂಟೆ ಕಾಲ ವಾದ ಮಂಡಿಸಿದ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭೀಷೇಕ್‌ ಮನು ಸಿಂಘ್ವಿ, ಸದ್ಯಕ್ಕೆ ತಮ್ಮ ವಾದ ಪೂರೈಸಿದ್ದು, ರಾಜ್ಯಪಾಲರ ಕಚೇರಿ ಹಾಗೂ ಇತರೆ ಪ್ರತಿವಾದಿಗಳು ವಾದ ಮಂಡಿಸಿದ ನಂತರ ಅದಕ್ಕೆ ಉತ್ತರ ನೀಡಲು ತಮಗೆ ಅವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ರಾಜ್ಯಪಾಲರ ಕಚೇರಿ ಪರ ಹಾಜರಿದ್ದ ಸುಪ್ರೀಂ ಕೋರ್ಟ್‌ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಶನಿವಾರ ತಮ್ಮ ವಾದ ಮಂಡಿಸಲಾಗುವುದು ಎಂದರು. ತುಷಾರ್‌ ಮೆಹ್ತಾ ವಾದ ಮಂಡನೆ ನಂತರ ತಾವು ವಾದ ಮಾಡುವುದಾಗಿ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್ ಕಾನೂನು ಘಟಕದ ಪ್ರದೀಪ್ ಕುಮಾರ್ ಅವರ ಪರ ವಕೀಲರು ತಿಳಿಸಿದರು. ಇದರಿಂದ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿತು.

ಸಿದ್ದು ಪರ ಸಿಂಘ್ವಿ ವಾದ:

ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಅಬ್ರಹಾಂ ನಂತರ ಖಾಸಗಿ ದೂರು ದಾಖಲಿಸುವುದಕ್ಕೂ ಮುನ್ನ ರಾಜ್ಯಪಾಲರಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದಾರೆ. ಅಬ್ರಹಾಂ ಅವರ ಅರ್ಜಿ ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದು, ಅದಕ್ಕೆ ಮುಖ್ಯಮಂತ್ರಿಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಆದರೆ, ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಆದೇಶದಲ್ಲಿ ಅಬ್ರಹಾಂ ಜತೆಗೆ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ಅವರ ಅರ್ಜಿಗಳನ್ನೂ ಉಲ್ಲೇಖಿಸಿ ಅನುಮತಿ ನೀಡಿದ್ದಾರೆ. ಆದರೆ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅವರು ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ವಿಚಾರವನ್ನು ಶೋಕಾಸ್‌ ನೋಟಿಸ್‌‌ನಲ್ಲಿ ತಿಳಿಸಿಯೇ ಇಲ್ಲ. ಈ ಮೂಲಕ ರಾಜ್ಯಪಾಲರು ಸಹಜ ನ್ಯಾಯದ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದರು.

ಅಲ್ಲದೆ, ಅರ್ಜಿಯಲ್ಲಿ 3ನೇ ಪ್ರತಿವಾದಿಯಾಗಿರುವ ದೂರುದಾರ ಟಿ.ಜೆ.ಅಬ್ರಹಾಂ ಅವರು ಮನವಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅನುಸಾರ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ, ಅದೇ ಅಬ್ರಹಾಂ ತಮ್ಮ ಪ್ರಮಾಣ ಪತ್ರದಲ್ಲಿ ಸೆಕ್ಷನ್ 17ಎ ಅನುಸಾರ ಪೂರ್ವಾನುಮತಿ ಬೇಕಿಲ್ಲ ಎಂದಿದ್ದಾರೆ. ಅಂದರೆ ಕೋರ್ಟ್‌ ಮುಂದೆ ಒಂದು ಹೇಳಿಕೆ ಮತ್ತು ರಾಜ್ಯಪಾಲರ ಮುಂದೆ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ಅಬ್ರಹಾಂಗೆ ದಂಡ ವಿಧಿಸಬೇಕು. ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನೇ ಹಿಂಪಡೆಯಬೇಕು. ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ಸೂಕ್ತ ರೀತಿಯಲ್ಲಿ ವಿವೇಚನೆ‌ ಬಳಸಿ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ, ರಾಜ್ಯಪಾಲರ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಇನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್‌ ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆ ಹಂತದಲ್ಲಿದೆ. ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಕೆಯಾಗಿರುವ ಮನವಿಗಳು ರಾಜ್ಯಪಾಲರ ಮುಂದೆ ಬಹುಕಾಲದಿಂದ ಬಾಕಿ ಉಳಿದಿವೆ. ಅವುಗಳ ವಿಚಾರದಲ್ಲಿ ರಾಜ್ಯಪಾಲರು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಸಿದ್ದರಾಮಯ್ಯ ವಿರುದ್ಧ ಮಾತ್ರ ತ್ವರಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಶೋಕಾಸ್‌ ನೋಟಿಸ್‌ಗೆ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಹಾಗೂ ಸಚಿವ ಸಂಪುಟದ ನಿರ್ಣಯ ಸೇರಿದಂತೆ ಯಾವ ಕಾನೂನಾತ್ಮಕ ಅಂಶಗಳನ್ನೂ ಪರಿಗಣಿಸದೆ, ಕೇವಲ ಸಚಿವ ಸಂಪುಟದ ತೀರ್ಮಾನಕ್ಕೆ ತಾವು ಬದ್ಧರಾಗಿರಬೇಕಿಲ್ಲ ಎಂಬ ಕಾರಣವನ್ನು ಅನುಮತಿಯ ವೇಳೆ ನೀಡಲಾಗಿದೆ. ಅದು ಬಿಟ್ಟು ಮತ್ಯಾವುದೇ ಕಾರಣ ನೀಡಿಲ್ಲ. ಕಾರಣ ನೀಡದೇ ಇರುವುದಕ್ಕಾಗಿಯೇ ರಾಜ್ಯಪಾಲರ ಅನುಮತಿ ರದ್ದುಪಡಿಸಬೇಕಿದೆ ಎಂದು ಪ್ರಬಲವಾಗಿ ವಾದಿಸಿದರು.

ಆಕ್ಷೇಪಣೆ ಸಲ್ಲಿಸಲ್ಲ: ರಾಜ್ಯಪಾಲರ ವಕೀಲರು

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸಿಂಘ್ವಿ ಹಾಜರಾಗಿ, ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅವರು ಅರ್ಜಿಗೆ ಸಲ್ಲಿಸಿರುವ ಆಕ್ಷೇಪಣೆ ಒಂದು ದಿನದ ಹಿಂದೆ ದೊರೆತಿದೆ. ಅಗತ್ಯ ಬಿದ್ದರೆ ಅದಕ್ಕೆ ಪ್ರತ್ಯುತ್ತರ ಸಲ್ಲಿಸುವ ಅವಕಾಶ ಕಲ್ಪಿಸಬೇಕು. ಉಳಿದ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿದರೆ, ಅದಕ್ಕೂ ಉತ್ತರ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಜ್ಯಪಾಲರ ಕಚೇರಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕಿರಿಯ ವಕೀಲರು, ಇಡೀ ಪ್ರಕರಣ ಶುದ್ಧ ಕಾನೂನಿನ ಪ್ರಶ್ನೆ ಒಳಗೊಂಡಿದೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಬೇಕಾಗುವುದಿಲ್ಲ. ಆದರೆ, ಅರ್ಜಿದಾರರ (ಮುಖ್ಯಮಂತ್ರಿ ಸಿದ್ದರಾಮಯ್ಯ) ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪ್ರಕರಣದ ಕಾನೂನಿಗೆ ಸಂಬಂಧಿಸಿದಂತೆ ಲಿಖಿತ ವಾದಾಂಶ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಪಿ.ಎಸ್.ಪ್ರದೀಪ್‌ ಕುಮಾರ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ರಾಜ್ಯಪಾಲರ ಅನುಮತಿ ಪ್ರಶ್ನಿಸಿರುವ ಅರ್ಜಿಯು ಸಂಪೂರ್ಣವಾಗಿ ಕಾನೂನಿನ ಪ್ರಶ್ನೆಯಾಗಿದೆ. ಹೀಗಾಗಿ, ತಮ್ಮ ಯಾವುದೇ ಆಕ್ಷೇಪಣೆ ಇಲ್ಲ. ಅರ್ಜಿದಾರರೇ ಎಲ್ಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಟ್ಟಿರುವುದರಿಂದ ತಮ್ಮ ಕಡೆಯಿಂದ ಯಾವುದೇ ದಾಖಲೆ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು. ಈ ಎಲ್ಲ ಅಂಶಗಳನ್ನು ನ್ಯಾಯಪೀಠ ದಾಖಲಿಸಿಕೊಂಡಿತು.

ಸಿದ್ದು ವಾದವೇನು?

- ಅಬ್ರಹಾಂ ಅರ್ಜಿ ಆಧರಿಸಿ ರಾಜ್ಯಪಾಲರು ಸಿಎಂಗೆ ಶೋಕಾಸ್‌ ನೋಟಿಸ್‌ ನೀಡಿದ್ದರು- ಆದರೆ ಪ್ರಾಸಿಕ್ಯೂಷನ್‌ ಅನುಮತಿ ವೇಳೆ ಸ್ನೇಹಮಯಿ ಕೃಷ್ಣ, ಪ್ರದೀಪ್‌ ಅರ್ಜಿ ಉಲ್ಲೇಖ

- ಇವರಿಬ್ಬರ ಅರ್ಜಿ ವಿಚಾರವನ್ನು ನೋಟಿಸ್‌ನಲ್ಲಿ ತಿಳಿಸದೆ ಸಹಜ ನ್ಯಾಯ ಮುರಿದಿದ್ದಾರೆ

- ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿಯಿಂದ ವಾದ