ಹತ್ತಿದ ಏಣಿ ಒದೆಯುವ ಕೆಲಸ ನಡೆಯುತ್ತಿದೆ: ಸಂಸದ ಬಿ.ವೈ.ರಾಘವೇಂದ್ರ

| Published : Mar 27 2024, 01:04 AM IST

ಹತ್ತಿದ ಏಣಿ ಒದೆಯುವ ಕೆಲಸ ನಡೆಯುತ್ತಿದೆ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಳ್ಳುವ ಅವಶ್ಯಕತೆ ದೇಶದಲ್ಲಿ ಬಿಜೆಪಿಯ ಯಾವುದೇ ಅಭ್ಯರ್ಥಿಗೂ ಬರುವುದಿಲ್ಲ. ಬಿಜೆಪಿಗೆ ಬೂತ್ ಮಟ್ಟದ ಕಾರ್ಯಕರ್ತರಿದ್ದಾರೆ ಮೋದಿಜಿ ನಾಯಕತ್ವವಿದೆ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿ, ಕನಕ ಜಯಂತಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿಗಮಗಳ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹತ್ತಿದ ಏಣಿ ಒದೆಯುವ ಕೆಲಸ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸಂಸದ, ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರೋಕ್ಷವಾಗಿ ಕೆ.ಎಸ್‌.ಈಶ್ವರಪ್ಪರಿಗೆ ಟಾಂಗ್‌ ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿ ಎರಡು ವಾರಗಳೇ ಆಗಿವೆ. ರಾಷ್ಟ್ರದ ಮತ್ತು ರಾಜ್ಯದ ನಾಯಕರು ಅವರ ನಡೆ ಗಮನಿಸುತ್ತಿದ್ದಾರೆ. ಖಂಡಿತ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಳ್ಳುವ ಅವಶ್ಯಕತೆ ದೇಶದಲ್ಲಿ ಬಿಜೆಪಿಯ ಯಾವುದೇ ಅಭ್ಯರ್ಥಿಗೂ ಬರುವುದಿಲ್ಲ. ಬಿಜೆಪಿಗೆ ಬೂತ್ ಮಟ್ಟದ ಕಾರ್ಯಕರ್ತರಿದ್ದಾರೆ ಮೋದಿಜಿ ನಾಯಕತ್ವವಿದೆ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ವಾಲ್ಮೀಕಿ ಜಯಂತಿ, ಕನಕ ಜಯಂತಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿಗಮಗಳ ತಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಕಠಿಣ ರೀತಿಯಲ್ಲಿ ಜಾರಿಗೆ ತರಲಾಗಿದೆ. ಭ್ರೂಣ ಹತ್ಯೆ ತಡೆಯುವ ಸಲುವಾಗಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಈ ಎಲ್ಲ ಯೋಜನೆಗಳು ಈ ಬಾರಿ ನಮ್ಮ ಕೈ ಹಿಡಿಯಲಿವೆ ಎಂದರು.

ಈ ಬಾರಿ ದಾಖಲೆಯ ಗೆಲುವು:

ಕಳೆದ ಬಾರಿ 2,28,000 ಮತಗಳ ಅಂತರದಿಂದ ಗೆಲ್ಲಿಸಿದ್ದ ಮತದಾರರು ಈ ಬಾರಿ ದಾಖಲೆ ಮುರಿದು ಹೆಚ್ಚಿನ ಅಂತರದಲ್ಲಿ ಗೆಲ್ಲಿಸುತ್ತಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರಧಾನಿ ಮೋದಿಜಿಯವರ ಮಡಿಲಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಜನಾರ್ದನ್ ರೆಡ್ಡಿ ಅವರ ಸೇರ್ಪಡೆಯಿಂದ ಬಳ್ಳಾರಿ, ಕೊಪ್ಪಳ ಭಾಗಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದರು.

ನಟರ ನೋಡಲು ಜನ ಸೇರುತ್ತಾರೆ

ಶಿವಮೊಗ್ಗ ಚುನಾವಣಾ ಪ್ರಚಾರದಲ್ಲಿ ಚಲನಚಿತ್ರ ನಟರು ಬಂದಾಗ ಬೆಳ್ಳಿ ಪರದೆಯಲ್ಲಿ ನೋಡುವ ನಟರನ್ನು ನೇರವಾಗಿ ನೋಡಲು ಜನ ಸೇರುತ್ತಾರೆ. ಆದರೆ, ಅಲ್ಲಿ ಸೇರುವ ಜನರ ಬೆಂಬಲ ಮತಗಳಾಗಿ ಪರಿವರ್ತನೆಯಾಗಲ್ಲ. ಕ್ಷೇತ್ರದ ಪ್ರಜ್ಞಾವಂತ ಮತದಾರರು ನಾಲ್ಕನೇ ಬಾರಿ ಈ ರೀತಿಯ ಚುನಾವಣಾ ಪ್ರಚಾರ ನೋಡುತ್ತಿದ್ದಾರೆ. ಕ್ಷೇತ್ರದಲ್ಲಿ ಶಾಶ್ವತವಾಗಿ ನೆಲೆಯೂರಿ ತಮ್ಮ ಕಣ್ಣೀರನ್ನು ಯಾರು ಒರೆಸುತ್ತಾರೆ ಎಂದು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ.

ಬಿ.ವೈ.ರಾಘವೇಂದ್ರ, ಸಂಸದ, ಬಿಜೆಪಿ ಅಭ್ಯರ್ಥಿ