ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಾರಿಗೇತರ ಆದಾಯ ಹೆಚ್ಚಿಸಲು ಹಾಗೂ ಪಾರದರ್ಶಕ ಬಾಡಿಗೆ ಸಂಗ್ರಹಕ್ಕಾಗಿ ಹೊಸ ಆ್ಯಪ್‌ ಬಳಸುವ ಮೂಲಕ ವ್ಯವಸ್ಥಿತ ಹಾಗೂ ನಿಖರ ಹೆಜ್ಜೆ ಇಡಲು ಮುಂದಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸಾರಿಗೇತರ ಆದಾಯ ಹೆಚ್ಚಿಸಲು ಹಾಗೂ ಪಾರದರ್ಶಕ ಬಾಡಿಗೆ ಸಂಗ್ರಹಕ್ಕಾಗಿ ಹೊಸ ಆ್ಯಪ್‌ ಬಳಸುವ ಮೂಲಕ ವ್ಯವಸ್ಥಿತ ಹಾಗೂ ನಿಖರ ಹೆಜ್ಜೆ ಇಡಲು ಮುಂದಾಗಿದೆ.

ಸಂಸ್ಥೆಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತನ್ನ ಬಸ್ ಸೇವೆಗಳನ್ನು ನಿರ್ವಹಿಸುತ್ತಿದ್ದು, ಈ ಜಿಲ್ಲೆಗಳಲ್ಲಿನ ಡಿಪೋ, ಬಸ್ ನಿಲ್ದಾಣ ಮತ್ತು ಕಚೇರಿಗಳಂತಹ ಆಸ್ತಿಗಳನ್ನು ಹೊಂದಿದೆ. ಇವುಗಳ ಪೈಕಿ ಬಸ್ ನಿಲ್ದಾಣಗಳಲ್ಲಿರುವ ಅಂಗಡಿ, ಹೋಟೆಲ್‌, ಉಪಾಹಾರ ಗೃಹ ಮತ್ತು ಇತರ ವಾಣಿಜ್ಯ ಮಳಿಗೆಗಳ ಮೂಲಕ ಸಂಸ್ಥೆಗೆ ಸಾರಿಗೆಯೇತರ ಆದಾಯ ಲಭಿಸುತ್ತಿದೆ.

ಹಸ್ತ ಚಾಲಿತ ವ್ಯವಸ್ಥೆಗೆ ಮುಕ್ತಿ:

ಈ ಹಿಂದೆ ಸಂಸ್ಥೆಯ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಬಾಡಿಗೆ, ಟೆಂಡರ್ ಮತ್ತು ಇತರ ಪ್ರಕ್ರಿಯೆಗಳನ್ನು ಸಂಸ್ಥೆಯ ಲೆಕ್ಕಪತ್ರ ವಿಭಾಗವು ಹಸ್ತ ಚಾಲಿತವಾಗಿ ನಿರ್ವಹಿಸುತ್ತಿತ್ತು. ಈ ಹಳೇಯ ವಿಧಾನದಿಂದಾಗಿ ಬಾಡಿಗೆ ಪಾವತಿಯಲ್ಲಿ ವಿಳಂಬ ಉಂಟಾಗಿ, ಅಂಗಡಿಗಳಿಂದ ಸಾರಿಗೆಯೇತರ ಆದಾಯವನ್ನು ಸಂಗ್ರಹಿಸುವಲ್ಲಿ ಸಂಸ್ಥೆಯು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಂಗಾ ಎಂ ಅವರು ''''''''''''''''ವಾಣಿಜ್ಯ ಪರವಾನಗಿ ನಿರ್ವಹಣೆ'''''''''''''''' ಆ್ಯಪ್ ಪರಿಚಯಿಸಿದ್ದಾರೆ. ಇದು ಅಂಗಡಿದಾರರು ಮತ್ತು ನಿಗಮ ಇಬ್ಬರಿಗೂ ಬಾಡಿಗೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ಹಾಗೂ ಸಾರಿಗೇತರ ಆದಾಯ ಸುಲಭವಾಗಿ ಗಳಿಸಲು ಸಹಾಯವಾಗಿದೆ.

ಈ ಹಿಂದೆ ಸಂಸ್ಥೆಯ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳ ಟೆಂಡರ್ ಅವಧಿ ಮುಗಿದ ನಂತರವೂ ಹೊಸ ಟೆಂಡರ್‌ ಕರೆಯಲು ಮತ್ತು ಅಂಗಡಿದಾರರಿಗೆ ಅಂಗಡಿಗಳನ್ನು ಮಂಜೂರು ಮಾಡಲು ಎರಡ್ಮೂರು ತಿಂಗಳುಗಳ ಸಮಯ ಹಿಡಿಯುತ್ತಿತ್ತು. ಈ ಅವಧಿಯಲ್ಲಿ ಅಂಗಡಿಗಳು ಖಾಲಿ ಉಳಿಯುತ್ತಿದ್ದವು ಮತ್ತು ನಿಗಮಕ್ಕೆ ಅವುಗಳಿಂದ ಯಾವುದೇ ಆದಾಯ ಬರುತ್ತಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.

2175 ಅಂಗಡಿ ಬಾಡಿಗೆ:

ಸಂಸ್ಥೆಯು ತನ್ನ ಆರು ಜಿಲ್ಲೆಗಳ ವಿವಿಧ ಬಸ್ ನಿಲ್ದಾಣಗಳಲ್ಲಿ ಒಟ್ಟು 2,175 ಅಂಗಡಿಗಳನ್ನು ಬಾಡಿಗೆಗೆ ನೀಡಿದೆ. ಇವುಗಳ ಮೂಲಕ ವಾರ್ಷಿಕ ಸುಮಾರು ₹ 48 ಕೋಟಿ ಆದಾಯ ಬರುತ್ತಿದೆ. ಮೂಲಗಳ ಪ್ರಕಾರ, ಸಂಸ್ಥೆಯು ಒಟ್ಟು 2,600 ಅಂಗಡಿಗಳನ್ನು ಹೊಂದಿದೆ. ಈ ಪೈಕಿ 425 ಅಂಗಡಿಗಳು ಖಾಲಿ ಇದ್ದರೆ, ಉಳಿದ 2,175 ಅಂಗಡಿಗಳನ್ನು ಬೇಕರಿ, ಹೋಟೆಲ್, ಉಪಾಹಾರ ಗೃಹ, ಸಾಮಾನ್ಯ ಅಂಗಡಿ, ಕಿಯೋಸ್ಕ್ ಮತ್ತು ಇತರ ಉದ್ದೇಶಗಳಿಗಾಗಿ ಬಾಡಿಗೆಗೆ ನೀಡಲಾಗಿದೆ. ಈ ಅಂಗಡಿಗಳು ಪ್ರಯಾಣಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲಕವಲ್ಲದೇ, ಸಂಸ್ಥೆಗೆ ಸಾರಿಗೆಯೇತರ ಆದಾಯ ಸಹ ತಂದುಕೊಡುತ್ತಿವೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಈ ಮೊದಲು ಬಾಡಿಗೆ ಪಾವತಿಸಲು ಅಂಗಡಿದಾರರು ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಈಗ ಆ್ಯಪ್ ಪರಿಚಯದಿಂದಾಗಿ ಆನ್‌ಲೈನ್‌ನಲ್ಲಿಯೇ ಪಾವತಿಸಬಹುದು ಮತ್ತು ಬಾಡಿಗೆ ಪಾವತಿಯ ಅಂತಿಮ ದಿನಾಂಕದ ಬಗ್ಗೆ ಆ್ಯಪ್ ಅವರಿಗೆ ನೆನಪಿಸುತ್ತದೆ. ಹೊಸ ವ್ಯವಸ್ಥೆಯ ಸಹಾಯದಿಂದ ಟೆಂಡರ್ ಅವಧಿ ಮುಗಿಯುವ ದಿನಾಂಕವನ್ನು ತಿಳಿಯಲು ಸಾಧ್ಯವಾಗುವುದರಿಂದ, ಈಗ ಮುಂಚಿತವಾಗಿಯೇ ಟೆಂಡರ್‌ ಕರೆಯಲು ಮತ್ತು ಸಮಯಕ್ಕೆ ಸರಿಯಾಗಿ ಅಂಗಡಿದಾರರಿಗೆ ಅಂಗಡಿ ಮಂಜೂರು ಮಾಡಲು ಸಾಧ್ಯವಾಗುತ್ತಿದೆ ಎಂದರು.ಸಂಸ್ಥೆಯು ಸಾರಿಗೇತರವಾಗಿ ಪ್ರತಿ ತಿಂಗಳು ₹ 3 ಕೋಟಿ ಬಾಡಿಗೆ ಸಂಗ್ರಹಿಸುತ್ತಿದ್ದೆವು. ಆದರೆ, ಈಗ, ವಾಣಿಜ್ಯ ಪರವಾನಗಿ ನಿರ್ವಹಣೆ ಆ್ಯಪ್ ಪರಿಚಯದ ನಂತರ ಪ್ರತಿ ತಿಂಗಳು ₹ 4 ಕೋಟಿ ಬಾಡಿಗೆ ಸಂಗ್ರಹಿಸುತ್ತಿದ್ದೇವೆ. ಆ ಮೂಲಕ ವರ್ಷಕ್ಕೆ ₹ 48 ಕೋಟಿಗಳಷ್ಟು ಸಾರಿಗೆಯೇತರ ಆದಾಯವನ್ನು ನಿಖರವಾಗಿ ಗಳಿಸುತ್ತಿದ್ದೇವೆ.ವಿವೇಕಾನಂದ ವಿಶ್ವಜ್ಞ ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ