ಸಾರಾಂಶ
ದಾವಣಗೆರೆ: ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಗರದಲ್ಲಿ ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಹೋರಾಟಕ್ಕೆ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಬೆಂಬಲಿಸಿದರು.
ಗ್ರಾಮದ ಹಿರಿಯ ಮುಖಂಡರು ಮಾತನಾಡಿ, ಆರುಂಡಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಬೇಕು. ಈ ಹಿಂದೆಯೂ ಸಾಕಷ್ಟು ಸಲ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಳ್ಳದೇ, ಅಸಡ್ಡೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಹಾವಳಿಯಿಂದಾಗಿ ಗ್ರಾಮದಲ್ಲಿ ಹಲವಾರು ಕಟ್ಟಡಗಳು, ಮಣ್ಣಿನ ಮನೆಗಳು ಬಿರುಕು ಬಿಟ್ಟಿವೆ. ಅಂತರ್ಜಲ ಮಟ್ಟ ಕುಸಿತಗೊಳ್ಳುತ್ತಿದೆ. ವಾಯುಮಾಲಿನ್ಯದಿಂದ ಜನ, ಜಾನುವಾರು, ಪಕ್ಷಿಗಳಿಗೆ ರೋಗ ತಗುಲುತ್ತಿದೆ. ಪಶು ಸಂಗೋಪನೆಯಲ್ಲಿ ಗ್ರಾಮಕ್ಕೆ ಹಿನ್ನಡೆಯಾಗಿದೆ. ಗ್ರಾಮೀಣ ಪರಿಸರಕ್ಕೆ ಧಕ್ಕೆಯಾಗಿದೆ. ತಕ್ಷಣವೇ ಜಿಲ್ಲಾಡಳಿತ ಅಕ್ರಮ ಕಲ್ಲು ಗಣಿಗಾರಿಕೆ, ಕ್ರಷರ್‌ಗಳನ್ನು ಶಾಶ್ವತವಾಗಿ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಮಾತನಾಡಿ, ಆರುಂಡಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿ, ವಾಯುಮಾಲಿನ್ಯದಿಂದ ಸಮಸ್ಯೆಗಳು ತಲೆದೋರಿದ್ದು, ಜನ ಆತಂಕ ಎದುರಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಸ್ಥಗಿತವಾಗಬೇಕು. ಗ್ರಾಮಸ್ಥರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.ಗ್ರಾಮದ ಸಿ.ಚಂದ್ರಪ್ಪ, ಶಿವಪ್ಪ, ಸತೀಶಪ್ಪ, ಬಿ.ಆರ್.ಪ್ರಕಾಶ, ಶ್ರೀನಿವಾಸ, ರಾಮಚಂದ್ರಪ್ಪ, ವೀರೇಶ, ಮೂರ್ತೆಪ್ಪ, ಬೀರಪ್ಪ, ನರಸಿಂಹಪ್ಪ, ಸುರೇಶ, ಕುಮಾರಪ್ಪ, ಹಾಲೇಶಪ್ಪ, ತಿಮ್ಮಣ್ಣ, ತಿಮ್ಮಜ್ಜರ ಶ್ರೀನಿವಾಸ, ಜವಳಿ ಪ್ರಕಾಶ ಸೇರಿದಂತೆ ಗ್ರಾಮಸ್ಥರು ಇದ್ದರು.
- - - -12ಕೆಡಿವಿಜಿ64.ಜೆಪಿಜಿ: