ದ.ಕ. ಮೋಡ ಸಹಿತ ಬಿಸಿಲಿನ ವಾತಾವರಣ

| Published : May 04 2024, 12:33 AM IST

ಸಾರಾಂಶ

ಮುಂದಿನ ಐದು ದಿನಗಳ ಕಾಲ ಬೇರೆ ಜಿಲ್ಲೆಗಳಲ್ಲಿ ಉಷ್ಣಾಂಶದ ತೀವ್ರತೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಭಾವ ಕಡಿಮೆಯಾಗಿದ್ದು, ಉಷ್ಣ ಅಲೆಯ ಬದಲು ತೇವಾಂಶದಲ್ಲಿ ಗಣನೀಯ ಏರಿಕೆ ಕಾಣಿಸಿಕೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಪ್ರಖರ ಬಿಸಿಲು ಇದ್ದರೂ ಇಡೀ ದಿನ ಮೋಡ ಸಹಿತ ಬಿಸಿಲಿನ ವಾತಾವರಣ ಕಂಡುಬಂದಿದೆ.

ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಗರಿಷ್ಠ 33.4 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 27 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಕಂಡುಬಂದಿದೆ. ಮುಂದಿನ 1-2 ದಿನ ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ಹಗಲು ಮೋಡ ಕವಿದ ವಾತಾವರಣ ಸಹಿತ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಐದು ದಿನಗಳ ಕಾಲ ಬೇರೆ ಜಿಲ್ಲೆಗಳಲ್ಲಿ ಉಷ್ಣಾಂಶದ ತೀವ್ರತೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಭಾವ ಕಡಿಮೆಯಾಗಿದ್ದು, ಉಷ್ಣ ಅಲೆಯ ಬದಲು ತೇವಾಂಶದಲ್ಲಿ ಗಣನೀಯ ಏರಿಕೆ ಕಾಣಿಸಿಕೊಳ್ಳಲಿದೆ. ತುಂಬೆಯಲ್ಲಿ ಹಳೆ ಡ್ಯಾಂ ಗೋಚರ:

ಮಂಗಳೂರಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದ ಕಾರಣದಿಂದ ಹೊಸ ಡ್ಯಾಂ ಇರುವ ಪಕ್ಕದಲ್ಲಿದ್ದ ಹಳೆಯ ಡ್ಯಾಂ ಗೋಚರಿಸಿದೆ.ಹೊಸ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಹಳೆಯ ಡ್ಯಾಂ ನೀರು ತುಂಬಿರುವ ಕಾರಣ ಹಳೆಯ ಡ್ಯಾಂ ಗೋಚರಿಸಿದೆ. ಈ ಹಿಂದೆ 2019ರ ಮೇ ಮಧ್ಯ ಭಾಗದಲ್ಲಿ ನೀರಿನ ಕೊರತೆಯಿಂದ ಹಳೆ ಡ್ಯಾಂ ಕಾಣಿಸಿತ್ತು. ಈ ಬಾರಿ ಮೇ ಮೊದಲ ವಾರದಲ್ಲಿಯೇ ನೀರಿನ ಕೊರತೆಯಿಂದ ಹಳೆಯ ಡ್ಯಾಂ ಕಾಣಿಸಲಾರಂಭಿಸಿದೆ.

ತುಂಬೆ ಡ್ಯಾಂನಲ್ಲಿ ಶುಕ್ರವಾರ ನೀರಿನ ಮಟ್ಟ 4.22 ಮೀ.ಗೆ ಇಳಿಕೆಯಾಗಿದೆ. ಗುರುವಾರ 4.28 ಮೀಟರ್‌ ಇತ್ತು. ಸಾಮಾನ್ಯವಾಗಿ ಒಂದು ದಿನದಲ್ಲಿ 10 ಸೆಂ.ಮೀ. ನೀರು ಡ್ಯಾಂನಲ್ಲಿ ಕಡಿಮೆಯಾಗುತ್ತದೆ. ಪ್ರಸಕ್ತ ತುಂಬೆ ಡ್ಯಾಂನಲ್ಲಿ ಇರುವ ನೀರು ಮುಂದಿನ 20 ದಿನಕ್ಕೆ ಮಾತ್ರ ಬರಲಿದೆ. ಇದನ್ನು ಒಂದು ದಿನ ನೀಡಿ ಮರುದಿನ ರೇಷನಿಂಗ್‌ ಮಾಡಿ, ಅದರ ಮರುದಿನ ಮತ್ತೆ ನೀರು ನೀಡುವ ಪ್ರಕಾರ ನೀಡಿದರೆ 40 ದಿನದವರೆಗೆ ಬಳಸಬಹುದು ಎನ್ನುವುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರ.