ರಾಜ್ಯದ ಪ್ರತಿ ವೈನ್‌ಸ್ಟೋರ್‌ ಮತ್ತು ಬಾರ್‌ಗಳಿಗೆ ಮಂತ್ಲಿ ಫಿಕ್ಸ್‌ ಆಗಿದೆ. ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಅಬಕಾರಿ ಅಕ್ರಮದ ಪಾಲು ಹೋಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಪ್ರತಿ ವೈನ್‌ಸ್ಟೋರ್‌ ಮತ್ತು ಬಾರ್‌ಗಳಿಗೆ ಮಂತ್ಲಿ ಫಿಕ್ಸ್‌ ಆಗಿದೆ. ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಅಬಕಾರಿ ಅಕ್ರಮದ ಪಾಲು ಹೋಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್‌ ಶಾಸಕರ ಜಂಟಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಮಹಾತ್ಮ ಗಾಂಧಿ ಹೆಸರು ಹೇಳುವ ಕಾಂಗ್ರೆಸ್‌ ಸರ್ಕಾರ, ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯದಲ್ಲಿ ಹೊಸದಾಗಿ 1,500ರಿಂದ 2 ಸಾವಿರ ಅಬಕಾರಿ ಲೈಸೆನ್ಸ್‌ ಕೊಟ್ಟಿದ್ದಾರೆ. ಒಂದೊಂದು ಲೈಸೆನ್ಸ್‌ಗೆ 2 ಕೋಟಿ ರು.ನಿಂದ 2.50 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಆಪಾದಿಸಿದರು.

ಪ್ರತಿ ಹಂತಕ್ಕೂ ರೇಟ್‌ ಫಿಕ್ಸ್‌:

ಅಬಕಾರಿ ಗುತ್ತಿಗೆದಾರರ ಸಂಘ ಈ ಸಂಬಂಧ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರಿಗೂ ದೂರು ನೀಡಲು ಮುಂದಾಗಿದೆ. ರಾಹುಲ್‌ ಗಾಂಧಿಗೂ ದೂರು ನೀಡಲು ಹೊರಟಿದೆ. ಆರು ತಿಂಗಳಿಂದ ಹಲವು ಬಾರಿ ಸಿಎಂರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ, ಈ ಅಬಕಾರಿ ಅಕ್ರಮದಲ್ಲಿ ಸಿಎಂಗೂ ಪಾಲು ಹೋಗುತ್ತಿದೆ. ಲೈಸೆನ್ಸ್‌ ಪಡೆಯಲು ಪ್ರತಿ ಹಂತಕ್ಕೂ ರೇಟ್ ಫಿಕ್ಸ್‌ ಆಗಿದೆ. ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕಿದ್ದ ಸಿಎಂ ಕಣ್ಣು ಕಾಣದ ಧೃತರಾಷ್ಟ್ರನಂತೆ ಕುಳಿತಿದ್ದಾರೆ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮದ ಹಣ ಕೇರಳ ಚುನಾವಣೆಗೆ:

ಈ ಹಿಂದೆ ಲಿಕ್ಕರ್‌ ಹಗರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಸರ್ಕಾರವೇ ಹೋಯಿತು. ಈ ಕಾಂಗ್ರೆಸ್‌ ಸರ್ಕಾರದಲ್ಲಿ ಅಬಕಾರಿ ಇಲಾಖೆಯಲ್ಲಿ ಸುಮಾರು 2-3 ಸಾವಿರ ಕೋಟಿ ರು. ಲೂಟಿ ನಡೆದಿದೆ. ಕೇರಳ ಚುನಾವಣೆಗೆ ಹಣ ಕಳುಹಿಸಲು ಸಂಗ್ರಹಿಸಲಾಗುತ್ತಿದೆ. ಇದೆಲ್ಲವನ್ನೂ ಮುಖ್ಯಮಂತ್ರಿ ನೋಡೇ ಇಲ್ಲ ಎಂಬಂತೆ ಕೂತಿದ್ದಾರೆ. ಗಾಂಧಿ ಅನುಯಾಯಿಗಳು ಎಂದು ಹೇಳಿಕೊಳ್ಳುವ ಸರ್ಕಾರ ಹಳ್ಳಿ ಹಳ್ಳಿ, ಮನೆ ಮನೆಗೆ ಮದ್ಯ ಪೂರೈಸುತ್ತಿದೆ. ಈ ಸರ್ಕಾರದಲ್ಲಿ ಎಗ್ಗಿಲ್ಲದೆ ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಸಚಿವರು ರಾಜೀನಾಮೆ ಕೊಡಲೇಬೇಕು. ಇಲ್ಲವಾದರೆ, ನಾವು ಸಿಎಂ ಸಿದ್ಧರಾಮಯ್ಯ ಅವರ ರಾಜೀನಾಮೆ ಕೇಳುತ್ತೇವೆ ಎಂದರು.

ಸಿಎಂ ಕುರ್ಚಿ ಜಗಳ ಡೈವರ್ಟ್‌ಗೆ ಪ್ರತಿಭಟನೆ:

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತ ಸರ್ಕಾರವೇ ಬೀದಿಗಿಳಿದಿದೆ. ಜನರ ಮನಸ್ಸು ಬೇರೆಡೆ ತಿರುಗಿಸಲು ಹೀಗೆ ಮಾಡುತ್ತಿದ್ದಾರೆ. ಸರ್ಕಾರ ನಡೆಸುವವರೇ ಪ್ರತಿಭಟನೆ ಮಾಡುವುದು, ಬೇಲಿಯೇ ಎದ್ದು ಹೊಲ ಮೇಯ್ದಂತೆ. ಈ ಸರ್ಕಾರಕ್ಕೆ ಗೌರವ, ಮಾನ-ಮರ್ಯಾದೆ ಇಲ್ಲ. ಇಡೀ ಸರ್ಕಾರ ಭಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಿಎಂ ಕುರ್ಚಿ ಜಗಳ ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.