ಸಿಎಂ ಅಂಗಳಕ್ಕೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಸಮಸ್ಯೆ

| Published : Feb 04 2025, 12:33 AM IST

ಸಾರಾಂಶ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರಿಗೆ ಸಮಗ್ರ ಪತ್ರ ಬರೆದಿದ್ದಾರೆ.

ಹರಪನಹಳ್ಳಿ: ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂಲಸೌಕರ್ಯದ ಕೊರತೆ ಸಂಬಂಧ ಕನ್ನಡಪ್ರಭ ದಿನಪತ್ರಿಕೆಯು ಜ.23ರಂದು "ಊಟದ ಕೊಠಡಿಯಲ್ಲಿ ಮಲಗುವ ಮೊರಾರ್ಜಿ ವಸತಿ ಶಾಲಾ ಮಕ್ಕಳು " ತಲೆಬರಹದಡಿ ಮಾಡಿದ ವರದಿ ಇದೀಗ ಮುಖ್ಯಮಂತ್ರಿ ಕಚೇರಿ ತಲುಪಿದೆ.

ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರಿಗೆ ಸಮಗ್ರ ಪತ್ರ ಬರೆದಿದ್ದಾರೆ.

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ 2017-18ನೇ ಸಾಲಿನಲ್ಲಿ ಆರಂಭವಾಗಿದ್ದು, 2022-23 ರವರೆಗೂ ಬಾಡಿಗೆ ಕಟ್ಟಡದಲ್ಲಿತ್ತು. ಬಾಡಿಗೆ ಕಟ್ಟಡದಲ್ಲಿ ತೀವ್ರ ನೀರಿನ ಸಮಸ್ಯೆ ಇದ್ದ ಕಾರಣ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಹೊಸ ಕಟ್ಟಡಕ್ಕೆ 2023-24ನೇ ಸಾಲಿನಲ್ಲಿ ಸ್ಥಳಾಂತರ ಮಾಡಲಾಗಿದೆ.

ಇಲ್ಲಿ ಜಾಗದ ಕೊರತೆಯಿಂದ ಕೆಲ ವಿದ್ಯಾರ್ಥಿಗಳಿಗೆ ಊಟದ ಹಾಲ್‌ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ತರಗತಿ ಕೊಠಡಿಗಳ ಕೊರತೆ ಸಮಸ್ಯೆಯಿಂದ ನೆಲಮಹಡಿ ಕಾರಿಡಾರ್‌ ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

ಪ್ರಸ್ತುತ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ವಂತ ಕಟ್ಟಡ ಶೃಂಗಾರ ತೋಟದ ಬಳಿ ನಿರ್ಮಾಣಗೊಳ್ಳುತ್ತಿದೆ. ಆ ಕಾಮಗಾರಿ ಪೂರ್ಣಗೊಂಡ ಕೂಡಲೇ ಅಲ್ಲಿಗೆ ಈ ಶಾಲೆಯನ್ನು ಸ್ಥಳಾಂತರ ಮಾಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಶೃಂಗಾರತೋಟದ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡ ಕಳೆದ 5 ವರ್ಷದಿಂದ ಆಮೆಗತಿಯಲ್ಲಿ ಸಾಗಿದೆ ಎನ್ನುವುದು ಮುಖ್ಯವಾಗಿದೆ. ಆದಷ್ಟು ಬೇಗ ಅಲ್ಲಿಯ ಕಾಮಗಾರಿ ಪೂರ್ಣಗೊಳಿಸಲು ಸಂಬಂಧ ಪಟ್ಟವರು ಗುತ್ತಿಗೆದಾರರಿಗೆ ಸೂಚಿಸಬೇಕಿದೆ.

ಒಟ್ಟಿನಲ್ಲಿ ಕನ್ನಡಪ್ರಭ ಪ್ರಕಟಿಸಿದ ವರದಿ ಕೊನೆಗೆ ಇಷ್ಟಾದರೂ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ತೆರೆಸಿರುವುದು ಸಮಾಧಾನದ ಸಂಗತಿ.

ಊಟದ ಕೊಠಡಿಯಲ್ಲಿ ಮಲಗುವ ಮೊರಾರ್ಜಿ ವಸತಿ ಶಾಲಾ ಮಕ್ಕಳು ಎಂಬ ತಲೆಬರಹದಡಿ ಹರಪನಹಳ್ಳಿ ವಸತಿ ಶಾಲೆಯ ಮೂಲಸೌಕರ್ಯದ ಬಗ್ಗೆ ಕನ್ನಡಪ್ರಭ ಪ್ರಕಟಿಸಿರುವ ವರದಿ.