‘ನಾಟಿ ಕೋಳಿ ತಿನ್ನಬೇಕಯ್ಯ, ಏನೂ ಆಗಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸಲಹೆ ನೀಡಿದ ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ನಡೆಯಿತು.
ಕನ್ನಡಪ್ರಭ ವಾರ್ತೆ, ಸುವರ್ಣ ವಿಧಾನಸೌಧ
‘ನಾಟಿ ಕೋಳಿ ತಿನ್ನಬೇಕಯ್ಯ, ಏನೂ ಆಗಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸಲಹೆ ನೀಡಿದ ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ನಡೆಯಿತು.ವಿಧಾನಸಭೆ ಸಭಾಧ್ಯಕ್ಷರ ಕೊಠಡಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮುಖಾಮುಖಿ ಆದರು. ಈ ವೇಳೆ ಅಶೋಕ್ ಹೆಗಲಮೇಲೆ ಕೈ ಹಾಕಿದ ಸಿದ್ದರಾಮಯ್ಯ ಅವರು, ‘ಯಾಕಯ್ಯ ಸಣ್ಣಗಾಗಿದ್ದೀಯಾ’ ಎಂದು ಪ್ರಶ್ನಿಸಿದರು. ಆಗ ಅಶೋಕ್ ಅವರು, ‘ಇಲ್ಲ ಸಾರ್, ನಾನು ನಿಮ್ಮ ರೀತಿ ನಾಟಿಕೋಳಿ ತಿನ್ನೋದಿಲ್ಲ. ಈಗ ಅದನ್ನ ಬಿಟ್ಟಿದ್ದೇನೆ’ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾಟಿಕೋಳಿ ತಿನ್ನಬೇಕಯ್ಯ, ಏನು ಆಗೋದಿಲ್ಲ’ ಎಂದು ಸಲಹೆ ನೀಡಿದರು.
ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ನಾಟಿಕೋಳಿ ಸಾಂಬಾರು ಸವಿದಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಅಶೋಕ್ ಅವರು, ‘ಹನುಮ ಜಯಂತಿ ದಿನ ನಾಟಿ ಕೋಳಿ ತಿಂದಿದ್ದಾರೆ. ಬ್ರೇಕ್ ಫಾಸ್ಟ್ ಹೆಸರಿನಲ್ಲಿ ನಾಟಿ ಕೋಳಿ ಮರ್ಡರ್ ಆಗಿದೆ’ ಎಂದು ಕಿಚಾಯಿಸಿದ್ದರು.ಬಾಕ್ಸ್..ಅವಿಶ್ವಾಸ ನಿರ್ಣಯ
ಮಾಡ್ತೀರೇನಪ್ಪಾ?:ಬಿಜೆಪಿಗೆ ಸಿಎಂಬಿಜೆಪಿ ಶಾಸಕ ಸುನಿಲ್‌ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕೈಕುಲುಕಿ ಶುಭಾಶಯ ಕೋರಿದರು. ಈ ವೇಳೆ ಸಿದ್ದರಾಮಯ್ಯ ಅವರು, ‘ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ?’ ಎಂದು ನಗುತ್ತಲೇ ಕಿಚಾಯಿಸಿದರು. ಇದಕ್ಕೆ ಸುನಿಲ್‌ಕುಮಾರ್ ಹಾಗೂ ಆರ್. ಅಶೋಕ್ ನಕ್ಕು ಸುಮ್ಮನಾದರು.