ಸಾರಾಂಶ
- ರಾಜ್ಯದ ಬೇರೆ ಕಡೆ ಜನ ಸಾವನ್ನಪ್ಪಿದರೆ ಸಿಎಂ ಹಾಗೂ ಕಾಂಗ್ರೆಸ್ಸಿಗೆ ಜವಾಬ್ದಾರಿ ಇರುವುದಿಲ್ಲವೇ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಸಿಎಂ ಎಂದು ನಾನು ತಿಳಿದಿದ್ದೆ. ಆದರೆ ಸಿದ್ದರಾಮಯ್ಯ ತಾನು ವಿಧಾನ ಸೌಧದ ಮೆಟ್ಟಿಲಿಗೆ ಮಾತ್ರ ಸಿಎಂ ಎಂದು ಭಾವಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜವಾಬ್ದಾರಿ ಮೇರೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಿದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ರಾಜ್ಯದ ಬೇರೆ ಕಡೆ ಜನ ಸಾವನ್ನಪ್ಪಿದರೆ ಸಿಎಂ ಹಾಗೂ ಕಾಂಗ್ರೆಸ್ಸಿಗೆ ಜವಾಬ್ದಾರಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.ಸರ್ಕಾರ ಎರಡು ಕಡೆ ಕಾರ್ಯಕ್ರಮ ಆಯೋಜಿಸಿದ ಕಾರಣ ಪೊಲೀಸರು ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸುರಕ್ಷತೆ ಬಗ್ಗೆ ಪೊಲೀಸರು ಗಮನಹರಿಸಿದರು. ಇದೆ ವೇಳೆ ಜನಸಾಮಾನ್ಯರು ಸಾವನ್ನ ಪ್ಪಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರು ಮೃತಪಟ್ಟಿದ್ದಾರೆ ಎಂದು ತಿಳಿದಾಗ ಸಿಎಂ ಆತ್ಮಸಾಕ್ಷಿಗೆ ಚುಚ್ಚಬೇಕಿತ್ತಲ್ಲವೇ ಎಂದು ಹೇಳಿದ ಅವರು, ವಿಧಾನಸೌಧದ ಮೆಟ್ಟಿಲ ಮೇಲಿನ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಕರೆಸಿದ್ದು ಯಾರು ? ಡಿಪಿಆರ್ ಅವರಿಗೆ ಲೆಟರ್ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.ಬೆಂಗಳೂರು ಕಾಲ್ತುಳಿತ ಪ್ರಕರಣ ನಡೆದ ಬಳಿಕ ನಾಲ್ಕನೇ ತಾರೀಖಿನ ಲೆಟರ್ ಗೆ 5 ನೇ ತಾರೀಖು ಸಹಿ ಹಾಕಿಸಿ ಕೊಂಡಿದ್ದಾರೆ. ಕಾಲ್ತುಳಿತ ಪ್ರಕರಣ ನಡೆದ ಮೇಲೆ ದಾಖಲೆ ಮಾಡಿಕೊಳ್ಳಲು ಇಲಾಖೆಗಳ ಸೀಲ್ ಹಾಗೂ ಸಹಿ ಹಾಕಿಸಿ ಕೊಂಡಿದ್ದಾರೆ. ಹೀಗಾಗಿಯೇ ರಾಜ್ಯದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಒತ್ತಾಯಿಸಿದ್ದೇನೆ ಎಂದರು.ವಿಸ್ಕಿ ಪ್ರಮೋಟ್ ಮಾಡಲು ಸಿಎಂ, ಡಿಸಿಎಂ ರೇಸ್ ಗೆ ಬೀಳಬೇಕಿತ್ತಾ
ವಿಸ್ಕಿ ಪ್ರಮೋಟ್ ಮಾಡಲು ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಟ್ಟೇ ಎಂದು ವಿಜಯ ಮಲ್ಯ ಹೇಳಿದ್ದಾರೆ. ಹೀಗಿರುವಾಗ ಮಲ್ಯ ಅವರ ವಿಸ್ಕಿ ಪ್ರಮೋಟ್ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರೇಸ್ ಗೆ ಬೀಳಬೇಕಿತ್ತಾ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.ಘಟನೆ ನಡೆದ ದಿನ ಸುಮಾರು 4 ಗಂಟೆ ಸುಮಾರಿಗೆ ನಾನು ಪಕ್ಷದ ಕಚೇರಿಯಲ್ಲಿದ್ದೆ. ಆಗ ತುಳಿತದಲ್ಲಿ ಮೂರು ಜನ ಸಾವನಪ್ಪಿ ದ್ದಾರೆ ಎಂಬ ಮಾಹಿತಿ ಬಂತು. ಸಾಮಾನ್ಯ ಎಂಎಲ್ಸಿ ಆದ ನನಗೆ ಮಾಹಿತಿ ಬಂದಿರುವಾಗ ಸಿಎಂ ಸಿದ್ದ ರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿ ಇರಲಿಲ್ಲವೇ ? ಡಿಸಿಎಂ ಕಪ್ ಗೆ ಮುತ್ತಿಡಲು ಹೋಗುತ್ತಾರೆ. ಸಿಎಂ ದೋಸೆ ತಿನ್ನಲು ಹೋಗುತ್ತಾರೆ. ಹೀಗಿರುವಾಗ ಅವರಲ್ಲಿ ಮನುಷ್ಯತ್ವ ಹಾಗೂ ಮಾನವೀಯತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಯಾರಿಗೆ ನುಗ್ಗಿ ಹೊಡೆಯಬೇಕು ಜನ:ಬೆಂಗಳೂರಿನ ಕಾಲ್ತುಳಿತ ಪ್ರಕರಣ ಕ್ರಿಮಿನಲ್ ನೆಗ್ಲಿಜೆನ್ಸಿ. ಪಹಲ್ಗಾಮ್ ನಲ್ಲಿ ನಡೆದಿರುವುದು ಭಯೋತ್ಪಾದಕ ದಾಳಿ. ಉಗ್ರರ ದಾಳಿಗೆ ಪ್ರತಿಕಾರ ತೀರಿಸಿಕೊಂಡಿದ್ದೇವೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ನುಗ್ಗಿ ಹೊಡೆದಿದ್ದೇವೆ. ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಜನ ಯಾರಿಗೆ ನುಗ್ಗಿ ಹೊಡೆಯಬೇಕು. ಕಾರ್ಯಕ್ರಮ ಆಯೋಜನೆ ಮಾಡಿದವರಿಗೂ ಅಥವಾ ನಿರ್ಲಕ್ಷ್ಯ ಮಾಡಿದವರಿಗೂ ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಸರ್ಕಾರವೇ ಹೇಳಬೇಕು ನಮಗೆ ಆಳುವ ಯೋಗ್ಯತೆ ಇಲ್ಲ. ನುಗ್ಗಿ ಹೊಡೆಯಬೇಕು ಎಂದರೆ ಜನ ಅದನ್ನು ಮಾಡುತ್ತಾರೆ ಎಂದು ಹೇಳಿದರು.