ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮೋಹನ್‌ಕುಮಾರ್ ಅವರ ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿನ ಸಾಧನೆಯನ್ನು ಗುರುತಿಸಿ ಅಮೆರಿಕ ಮೂಲದ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ವಿವಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಗೌರವ ಡಾಕ್ಟರೇಟ್ ಪಡೆದ ಪ್ರಾಂಶುಪಾಲ ಡಾ.ಮೋಹನ್‌ಕುಮಾರ್ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದಿಸಿದ್ದಾರೆ. ತಾಲೂಕಿನ ಹುಳಿಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮೋಹನ್‌ಕುಮಾರ್ ಅವರು ಕ್ರಿಯಾಶೀಲ, ಸರಳ ವ್ಯಕ್ತಿತ್ವ ಹಾಗೂ ಸಮಾಜಸೇವೆ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುವ ಮೂಲಕ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ವಸತಿ ಶಾಲೆಯಲ್ಲಿ ದಿನದ ೨೪ ಗಂಟೆ ವಾಸ್ತವ್ಯವಿದ್ದು ಮಕ್ಕಳ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆ, ಸಂವಾದಗಳು, ವಿಚಾರಸಂಕಿರಣಗಳು, ಮಕ್ಕಳ ಅಧ್ಯಯನ ಪ್ರವಾಸ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮವಾದ ಪರಿಸರ ಕಲ್ಪಿಸಿಕೊಡುವ ಉದ್ದೇಶದಿಂದ ವಸತಿ ಶಾಲೆಯ ಆವರಣದಲ್ಲಿ ಉತ್ತಮವಾದ ಪರಿಸರ ನಿರ್ಮಿಸಿದ್ದಾರೆ. ಹಲವಾರು ಗಿಡ, ಬಳ್ಳಿಗಳು, ತರಕಾರಿ, ಸೊಪ್ಪು ಬೆಳೆಸಿ ಉತ್ತಮ ಪರಿಸರ ನಿರ್ಮಿಸಿದ್ದಾರೆ. ಇವೆಲ್ಲಾ ಸೇವೆಗಳನ್ನು ಗುರುತಿಸಿ ಅಮೆರಿಕ ಮೂಲದ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.