ಸಾರಾಂಶ
ಕ-ಕ ಭಾಗದ ಆರೋಗ್ಯ ಇಲಾಖೆಗೆ ₹850 ಕೋಟಿ
ಕನ್ನಡಪ್ರಭ ವಾರ್ತೆ ಕುಕನೂರು
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಕ್ಷೇತ್ರದಲ್ಲಿ ಆದಷ್ಟು ಅಭಿವೃದ್ಧಿ ಕಾರ್ಯ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿಯೂ ಆಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾತೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.ತಾಲೂಕಿನ ಬಳಗೇರಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ, ಸಣ್ಣ ನೀರಾವರಿ ಇಲಾಖೆಯಿಂದ ಬಳಗೇರಿ -ಬೂದಗುಂಪ ಗ್ರಾಮಗಳ ಮಧ್ಯ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಶಂಕುಸ್ಥಾಪನೆ, ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಇಲಾಖೆಗೆ ₹850 ಕೋಟಿ ಹಣ ಮೀಸಲಿಟ್ಟು, ಆರೋಗ್ಯ ಪೂರಕ ಯೋಜನೆ ಹಾಗೂ ಆಸ್ಪತ್ರೆಗಳ ಆರಂಭ ಕಾರ್ಯ ಮಾಡಲಾಗಿದೆ. ಆ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಮೂರು ನೂರು ಬೆಡ್ ಆಸ್ಪತ್ರೆ ಮಂಜೂರು ಮಾಡಿದ್ದು, ಕುಕನೂರಿಗೂ ₹42 ಕೋಟಿ ವೆಚ್ಚದಲ್ಲಿ 100 ಬೆಡ್ ಆಸ್ಪತ್ರೆ ಮಂಜೂರು ಮಾಡಲಾಗಿದೆ ಎಂದರು.ಸಿಎಂ ಕ್ಷೇತ್ರದಲ್ಲಿಯೂ ರಾಯರಡ್ಡಿ ಅವರ ಕ್ಷೇತ್ರದಷ್ಟು ಅಭಿವೃದ್ಧಿ ಕಾರ್ಯ ಆಗಲ್ಲ. ರಾಯರಡ್ಡಿ ಅವರಿಗೆ ಇನ್ನೂ ಹೆಚ್ಚು ಅಧಿಕಾರ ಸಿಗಲಿ. ಅವರಿಗೆ ಅಭಿವೃದ್ಧಿ ಪರ ಯೋಜನೆ ಮಾಡುವ ನಿಲುವುಂಟು. ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಮಾನ್ಯ ಜನರ ಕಷ್ಟ ಅರಿತು ಅವರ ಬದ್ಧತೆಗೆ ಅನುಗುಣವಾಗಿ ಕಾರ್ಯ ಮಾಡುವ ಸರ್ಕಾರ ಆಗಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಹಲವಾರು ಜನಪರ ಕೆಲಸ ಜಾರಿಗೆ ತಂದಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಆಗುತ್ತಿವೆ. ಸಿಎಂ ಸಿದ್ದರಾಮಯ್ಯನವರ ಯೋಜನೆಗಳು ಜನರಿಗೆ ತಲುಪುತ್ತಿವೆ. ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ವರ್ಷಕ್ಕೆ ₹65 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಜನರಿಗೆ ನೇರವಾಗಿ ಹಣ ನೀಡುವ ನಿಮಿತ್ತ ಸರ್ಕಾರದ ಮೇಲೆ ಹೊಟ್ಟೆಕಿಚ್ಚು. ಸರ್ಕಾರ ತಗಿಬೇಕು ಅನ್ನುತ್ತಾರೆ. ಅದು ಅಸಾಧ್ಯ. ಎಲ್ಲದಕ್ಕೂ ಅಲ್ಟೀಮೇಟ್ ಮಾಲಕರು ಜನರು, ಅವರ ಆಶೀರ್ವಾದ ಇದೆ. ನಾನು ಎಂಎಲ್ಎ ಆದಾಗ ಕ್ಷೇತ್ರದಲ್ಲಿ ಐದೇ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದವು. ಈಗ 20ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕುಕನೂರಿಗೆ 100 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ 42 ಕೋಟಿ ಮಂಜೂರು ಆಗಿದೆ ಎಂದರು.ಡಿಎಚ್ಒ ಲಿಂಗರಾಜ ಟಿ., ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಬಿ.ಎಸ್. ಪಾಟೀಲ್, ಉಪತಹಸೀಲ್ದಾರ್ ಮುರುಳೀಧರ ರಾವ್ ಕುಲಕರ್ಣಿ, ಪ್ರಮುಖರಾದ ವೀರನಗೌಡ ಬಳೂಟಗಿ, ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ಈರಪ್ಪ ಕುಡಗುಂಟಿ, ಯಂಕಣ್ಣ ಯರಾಶಿ, ಚಂದ್ರಶೇಖರ ಹಿರೇಮಠ, ನಾರಾಯಣಪ್ಪ ಹರಪನ್ಹಳ್ಳಿ, ಹನುಮೇಶ ಕಡೇಮನಿ, ಮಂಜುನಾಥ ಕಡೇಮನಿ, ಫರೀಧಾ ಬೇಗಂ ಇತರರಿದ್ದರು.