ಸಾರಾಂಶ
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಪರ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಪರ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಶಿಗ್ಗಾಂವಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ನ. 5, 6 ಹಾಗೂ 11ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ಸಿಗೆ ಗೆಲ್ಲುವ ಅವಕಾಶವಿದ್ದು, ನಾವು ಕೂಡ ವರ್ಕ್ ಮಾಡ್ತಾ ಇದ್ದೇವೆ. ಪಕ್ಷದ ಅಭ್ಯರ್ಥಿ ಪಠಾಣ್ ಕೂಡ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸಿದ್ದಾರೆ. ನಮಗೆ ನಮ್ಮದೇ ಪಕ್ಷದ ವೋಟುಗಳಿವೆ, ಲಿಂಗಾಯತರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ವಿಶ್ವಾಸವಿದ್ದು, ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ಇದೆ ಎಂದರು. ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗೆ ಎಚ್ಚರಿಕೆ ಗಂಟೆ ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಈ ಫಲಿತಾಂಶ ಅವರಿಗೆ ಎಚ್ಚರಿಕೆ ಗಂಟೆ, ನಮಗೆ ಅಲ್ಲ. ನಾವು ಮೂರೂ ಕ್ಷೇತ್ರಗಳಲ್ಲಿ ಗೆಲ್ತೀವಿ, ಈ ಚುನಾವಣೆ ಫಲಿತಾಂಶ ನಾಯಕತ್ವದ ಮೇಲೆ ಪರಿಣಾಮ ಬೀರಲ್ಲ. ನಾವು 136 ಶಾಸಕರಿದ್ದೇವೆ. ಪ್ಲಸ್, ಮೈನಸ್ ಒಂದು ಎರಡು ಸ್ಥಾನ ಆದಾಗ ಏನು ಪರಿಣಾಮ ಆಗಲ್ಲ ಎಂದರು.