ರಾಜ್ಯದ ರಾಜಕೀಯ ಅಸ್ಥಿರತೆಗೆ ಬ್ರೇಕ್‌ ಬೀಳುತ್ತದೆ ಎಂಬ ಅಂದಾಜು ಹುಸಿಯಾಗಿದೆ. ಈಗಲೂ ಅಸ್ಥಿರತೆ ಮುಂದುವರೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಡುವೆ ಮೇಲ್ನೋಟಕ್ಕೆ ಮಾತ್ರ ಕದನ ವಿರಾಮವಾಗಿದೆ. ಆದರೆ, ಇಬ್ಬರ ಮಧ್ಯದ ಮುಸುಕಿನ ಗುದ್ದಾಟ ಈಗಲೂ ಮುಂದುವರೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕೀ ಬಾತ್‌ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ರಾಜಕೀಯ ಅಸ್ಥಿರತೆಗೆ ಬ್ರೇಕ್‌ ಬೀಳುತ್ತದೆ ಎಂಬ ಅಂದಾಜು ಹುಸಿಯಾಗಿದೆ. ಈಗಲೂ ಅಸ್ಥಿರತೆ ಮುಂದುವರೆದಿದ್ದು, ಎರಡು ಬಣದವರು ಶಾಸಕರ ಖರೀದಿಗೆ ಮುಗಿಬಿದ್ದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಜೈಲಿನಲ್ಲಿರುವ ತಮ್ಮ ಶಾಸಕರ ಬೆಂಬಲ ಕ್ರೂಢೀಕರಿಸಲು ಮುಂದಾಗಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ ಡೋಲಾಯಮಾನವಾಗಿದೆ. ದೇಶದಲ್ಲಿ ಎಲ್ಲೂ ಇರಲಾರದ ರಾಜಕೀಯ ಅಸ್ಥಿರತೆ ಕರ್ನಾಟಕ ರಾಜ್ಯದಲ್ಲಿದೆ ಎಂದು ಜೋಶಿ ಟೀಕಿಸಿದರು.

ಅಸಹಾಯಕತೆ

ಭಯಂಕರ ಭ್ರಷ್ಟಾಚಾರದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ಆಡಳಿತ ನಡೆದಿದ್ದು, ಹಣಕಾಸು ದಯನೀಯ ಸ್ಥಿತಿಗೆ ತಲುಪಿದೆ. ಸಿಎಂ ಕುರ್ಚಿ ಗುದ್ದಾಟದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಅಸಹಾಯಕತೆ ತೋರಿದೆ ಎಂದು ಆರೋಪಿಸಿದರು.

ಷಡ್ಯಂತ್ರ

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಎರಡೂವರೆ ವರ್ಷ ಅಧಿಕಾರ ಅನುಭವಿಸಿದ್ದೇನೆ. ಈಗ ಸಿಎಂ ಸ್ಥಾನವನ್ನು ಬಿಟ್ಟು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಬಹುದಿತ್ತು. ಇಲ್ಲವೇ ಸಿದ್ದರಾಮಯ್ಯ ಹಿರಿಯರಿದ್ದಾರೆ, ಅವರೇ ಉಳಿದ ಅವಧಿಯಲ್ಲಿ ಸಿಎಂ ಆಗಿ ಮುಂದುವರೆಯಲಿ ಎಂದು ಡಿ.ಕೆ. ಶಿವಕುಮಾರ ಉದಾರತೆ ತೋರಬಹುದಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಹೈಕಮಾಂಡ್‌ ತೀರ್ಮಾಣಕ್ಕೆ ಇಬ್ಬರೂ ಬದ್ಧ, ಅವರು ಹೇಳಿದಂತೆ ಕೇಳುತ್ತೇವೆ ಎಂಬ ಹೇಳಿಕೆ ನೀಡಲು ಅರ್ಧ ಇಡ್ಲಿ ತಿನ್ನುವ ಅವಶ್ಯಕತೆ ಇತ್ತಾ?. ಈ ಇಬ್ಬರದೂ ಮೇಲ್ನೋಟಕ್ಕೆ ಕದನ ವಿರಾಮವಾದಂತಿದೆ. ಆದರೆ, ಇಬ್ಬರೂ ಒಬ್ಬರನ್ನೊಬ್ಬರು ಹೇಗೆ ಬಾವಿಗೆ ದೂಡಬೇಕು ಎಂಬ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಜೋಶಿ ವ್ಯಂಗವಾಡಿದರು.

ಸರ್ಕಾರ ವಿಸರ್ಜಿಸಿ

ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮದೇನು ನಡೆಯುವುದಿಲ್ಲ ಎಂಬುದು ಗೊತ್ತಿದೆ. ನಕಲಿ ಗಾಂಧಿ ಹಾಗೂ ವಾದ್ರಾ ಅವರದ್ದೇ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಹೈಕಮಾಂಡ್‌ಗೆ ಕಮಾಂಡಿಂಗ್‌ ಇದ್ದರೆ ತಕ್ಷಣ ರಾಜ್ಯದಲ್ಲಿನ ಗುದ್ದಾಟ ನಿಲ್ಲಿಸಿ, ಸುಸ್ಥಿರ ಆಡಳಿತಕ್ಕೆ ದಾರಿ ಮಾಡಿಕೊಡಬೇಕು. ಅದಾಗದೇ ಹೋದಲ್ಲಿ ವಿಧಾನಸಭೆ ವಿಸರ್ಜನೆ ಮಾಡಿ, ಚುನಾವಣೆಗೆ ಹೋಗಬೇಕು. ಅದನ್ನು ಬಿಟ್ಟು ಈ ರೀತಿ ನಿರ್ಲಕ್ಷ್ಯ ತೋರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುತ್ತಿರುವುದು ಸರಿಯಲ್ಲ ಎಂದರು.

ರೈತರ ಸಮಸ್ಯೆಗೆ ಸ್ಪಂದಿಸಲಿ

ರಾಜ್ಯದಲ್ಲಿ ಬಣ ಬಡಿದಾಟದಿಂದ ಸರ್ಕಾರ ನಿಷ್ಟ್ರೀಯವಾಗಿದ್ದು, ಗೋವಿನಜೋಳ ಬೆಳೆದ ರೈತರು ಸೂಕ್ತ ದರ ಸಿಗದೇ ಕಂಗಾಲಾಗಿದ್ದಾರೆ. ಗೋವಿನಜೋಳಕ್ಕೆ ದರ ಏರಿಕೆ ಮಾಡುವಂತೆ ರಾಜ್ಯದಲ್ಲಿ ಹೋರಾಟ ನಡೆದಿದೆ. ಆದರೆ, ಸರ್ಕಾರ ಖುರ್ಚಿ ಬಡಿದಾಟದಲ್ಲಿ ಕಾಲಹರಣ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಮೆಕ್ಕೆಜೋಳವನ್ನು ಆಹಾರವಾಗಿ ಸೇವಿಸುತ್ತಾರೆ. ಕೇಂದ್ರ ಸರ್ಕಾರ ಗೋವಿನಜೋಳದಿಂದ ಎಥೆನಾಲ್‌ ಉತ್ಪಾದನೆಗೆ ರಾಜ್ಯಕ್ಕೆ ಅನುಮತಿ, ಅನುದಾನ ನೀಡಿದೆ. ಕೂಡಲೇ ರಾಜ್ಯ ಸರ್ಕಾರ ರಾಜಕೀಯ ಬಡಿದಾಟ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ, ಎಂಎಸ್‌ಪಿ ದರದಲ್ಲಿ ಗೋವಿನಜೋಳ ಖರೀದಿಗೆ ಮುಂದಾಗಲಿ ಎಂದು ಸಚಿವ ಜೋಶಿ ಸಲಹೆ ನೀಡಿದರು.

ಮನ್‌ ಕೀ ಬಾತ್‌ ಕಾರ್ಯಕ್ರಮದಿಂದ ವಿಶೇಷ ಪ್ರೇರಣೆ!

ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿಯರವರ ಮನ್‌ ಕೀ ಬಾತ್‌ ಕಾರ್ಯಕ್ರಮ ಒಂದು ವಿಶೇಷವಾದಂತಹ ಪ್ರೇರಣೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಬೆಂಗೇರಿಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 128ನೇ ಆವೃತ್ತಿಯ ಮನ್‌ ಕೀ ಬಾತ್‌ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪ್ರತಿ ಬಾರಿಯೂ ದೇಶದಲ್ಲಿ ನಡೆಯುತ್ತಿರುವ ಒಂದೊಂದು ಹೊಸ ವಿಷಯ ಮತ್ತು ಯೋಜನೆಗಳ ಬಗ್ಗೆ ವಿವರಿಸುತ್ತಾರೆ. ದೇಶದ ನಾಗರಿಕರೊಂದಿಗೆ ಪ್ರಧಾನಿಯವರು ನೇರವಾಗಿ ಸಂವಹನ ನಡೆಸುತ್ತಾರೆ ಎಂದರು.

ಸರ್ಕಾರದ ನೀತಿಗಳು ಹಾಗೂ ದೇಶದ ಮೂಲೆ- ಮೂಲೆಗಳಿಂದ ಬರುವ ಪ್ರೇರಣಾದಾಯಕ ಕಥೆಗಳು, ಯಶಸ್ವಿ ವ್ಯಕ್ತಿಗಳ ಸಾಧನೆಗಳನ್ನು ಮೋದಿ ಹಂಚಿಕೊಳ್ಳುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಸಾಹಸ ಕ್ರೀಡೆಗಳು, ಗ್ರೀನ್‌ ಹೈಡ್ರೋಜನ್‌ ತಂತ್ರಜ್ಞಾನ, ಜೇನು ಸಾಗಾಣಿಕೆಯಿಂದಾಗುವ ಲಾಭದ ಬಗ್ಗೆ, ದೇಶದ ಐತಿಹಾಸಿಕ ವಸ್ತು ಸಂಗ್ರಹಾಲಯ ಹಾಗೂ ಟ್ಯಾಗೋರ್‌ ಬೀಚ್‌ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಧಾನಿಗಳು ಮನ್‌ ಕೀ ಬಾತ್‌ನಲ್ಲಿ ದೇಶದ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಜೋಶಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹಲವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಅಶೋಕ ವಾಲ್ಮೀಕಿ, ರಾಜು ಕಾಳೆ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಬೀರಪ್ಪ ಖಂಡೇಕರ್ ಸೇರಿದಂತೆ ಹಲವರಿದ್ದರು.