ಸಾರಾಂಶ
ಕನ್ನಡಪ್ರಭ ವಾರ್ತೆ ಧರ್ಮಸ್ಥಳ
ರಾಜ್ಯ ಸರ್ಕಾರ ಯಶಸ್ವಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಾಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ, ಡಿಸಿಎಂ ಅವರ ಮೊದಲ ಧರ್ಮಸ್ಥಳ ಭೇಟಿ ಇದಾಗಿದೆ.ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯಲ್ಲಿ ನಾಡಿನ ಒಳಿತಿಗಾಗಿ ವಿಶೇಷವಾಗಿ ಪ್ರಾರ್ಥಿಸಿದರು. ಬಳಿಕ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭ ಸಿಎಂ, ಡಿಸಿಎಂ ಜೊತೆ ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ವೆಂಕಟೇಶ್, ಬೈರತಿ ಸುರೇಶ್, ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಸಂಜಯ್ ಸುರೇಶ್, ಎಂಎಲ್‌ಸಿ ಗೋವಿಂದರಾಜು ಮತ್ತಿತರಿದ್ದರು. ಬಳಿಕ ಬೀಡಿಗೆ ತೆರಳಿ ಅಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಡಾ.ಹೆಗ್ಗಡೆ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಡಾ.ಹೆಗ್ಗಡೆ ಅವರು ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಧರ್ಮಾಧಿಕಾರಿ ಹರ್ಷಚಿತ್ತ: ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು ಎಂದು ಹೇಳಿದರು. ಈ ವೇಳೆ ಡಾ.ಹೆಗ್ಗಡೆ ಅವರು ಬೆಳ್ಳಿಯ ದೀಪ, ವಸ್ತ್ರದ ವಿಶೇಷ ಉಡುಗೊರೆ ನೀಡಿ ಸತ್ಕರಿಸಿದರು.
ನಾಡಿಗಾಗಿ ಪ್ರಾರ್ಥನೆ: ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ.ದೇವರ ದರ್ಶನದ ವೇಳೆ ಅನೇಕ ಮಹಿಳಾ ಭಕ್ತಾದಿಗಳು ತಮಗೆ ಪ್ರತಿ ತಿಂಗಳು 2 ಸಾವಿರ ರು. ಹಣ ಬರುತ್ತಿದೆ ಎಂದು ಸಂತೋಷ ಹಂಚಿಕೊಂಡರು. ಅವರ ಪ್ರಾರ್ಥನೆ ಹಾಗೂ ಆಶೀರ್ವಾದ ನಮಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಅವರ ಮನೆಯಲ್ಲಿ ಗೃಹಜ್ಯೋತಿ ಬೆಳಗುತ್ತಿದೆ. ಅನ್ನಭಾಗ್ಯ ಸಿಗುತ್ತಿದೆ. ಈ ಯೋಜನೆಗಳನ್ನು ಜಾರಿ ಮಾಡಿರುವುದಕ್ಕೆ ಮಂಜುನಾಥ ನಮಗೆ ಆಶೀರ್ವಾದ ಮಾಡಲಿದ್ದಾನೆ ಎಂದು ನಂಬಿದ್ದೇನೆ ಎಂದು ಡಿಸಿಎಂ ಡಿಕೆಶಿ ಹೇಳಿದರು.
ಇದಕ್ಕೂ ಮೊದಲು ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಧರ್ಮಸ್ಥಳ ಕ್ಷೇತ್ರದ ಮಹಾದ್ವಾರದಿಂದ ಪೂರ್ಣಕುಂಭ ಕಲಶ, ಬ್ಯಾಂಡ್‌ವಾದ್ಯ, ಪತಾಕೆಗಳೊಂದಿಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್, ಡಾ.ಹೆಗ್ಗಡೆ ಅವರ ಆಪ್ತ ಸಹಾಯಕ ವೀರು ಶೆಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಶಾಸಕ ಅಶೋಕ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿಯ ರಕ್ಷಿತ್ ಶಿವರಾಂ, ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಇದ್ದರು.ಧರ್ಮಸ್ಥಳಕ್ಕೆ ಆಗಮಿಸಿದ ಕೂಡಲೇ ಶ್ರೀಸನ್ನಿಧಿ ಅತಿಥಿಗೃಹದಿಂದ ಕ್ಷೇತ್ರದ ಸಂಪ್ರದಾಯದಂತೆ ಪಂಚೆ, ಶಲ್ಯ ಧರಿಸಿ ಸಿಎಂ, ಡಿಸಿಎಂ, ಸಚಿವರು ದೇವರ ದರ್ಶನಕ್ಕೆ ಆಗಮಿಸಿದರು. ದೇವರ ದರ್ಶನ, ಹೆಗ್ಗಡೆ ಅವರ ಭೇಟಿ ಬಳಿಕ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿ ಸಿಎಂ, ಡಿಸಿಎಂ, ಸಚಿವರುಗಳು ಕೆಲವು ಕಾಲ ವಿಶ್ರಾಂತಿ ಪಡೆದರು. ಸಂಜೆ ಮಂಗಳೂರಿಗೆ ಪ್ರಯಾಣ ಬೆಳೆಸಿದರು.ಒಂದೂವರೆ ತಾಸಿಗೂ ಅಧಿಕ ವಿಳಂಬ
ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರ ಧರ್ಮಸ್ಥಳ ಭೇಟಿ ಕಾರ್ಯಕ್ರಮ ಸುಮಾರು ಒಂದೂವರೆ ತಾಸಿಗೂ ಅಧಿಕ ವಿಳಂಬವಾಗಿತ್ತು.ಪೂರ್ವ ನಿಗದಿಯಂತೆ ಮಧ್ಯಾಹ್ನ 12.50ಕ್ಕೆ ಸಿಎಂ, ಡಿಸಿಎಂ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಮಂಗಳೂರಿಗೆ ಆಗಮಿಸುವಾಗ 12.50 ಆಗಿತ್ತು. ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಸಿಎಂ, ಡಿಸಿಎಂ ಧರ್ಮಸ್ಥಳಕ್ಕೆ ತೆರಳಿದರು. ಧರ್ಮಸ್ಥಳಕ್ಕೆ ನಿಗದಿತ ಮಧ್ಯಾಹ್ನ 1 ಗಂಟೆ ಬದಲು ಒಂದು ಮುಕ್ಕಾಲು ಗಂಟೆ ಅಂದರೆ 2.45ಕ್ಕೆ ಆಗಮಿಸಿದರು.
ಧರ್ಮಸ್ಥಳಕ್ಕೆ ಆಗಮಿಸಿದ ಸಿಎಂ ಡಿಸಿಎಂ ನೇರವಾಗಿ ಸನ್ನಿಧಿ ಗೆಸ್ಟ್ ಹೌಸಿಗೆ ತೆರಳಿದರು. ಅಲ್ಲಿಂದ 3 ಗಂಟೆಗೆ ಮಂಜುನಾಥನ ಸನ್ನಿಧಾನಕ್ಕೆ ಆಗಮಿಸಿದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ 3.10 ಗಂಟೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಅಲ್ಲಿಂದ ಸಂಜೆ 3.40ಕ್ಕೆ ಮತ್ತೆ ಸನ್ನಿಧಿ ಗೆಸ್ಟ್ ಹೌಸಿಗೆ ತೆರಳಿ ಭೋಜನ ಸ್ವೀಕರಿಸಿದರು. ಸಂಜೆ 5.05ಕ್ಕೆ ಧರ್ಮಸ್ಥಳದಿಂದ ಮಂಗಳೂರಿಗೆ ನಿರ್ಗಮಿಸಿದರು.ಭಕ್ತರಿಂದ ಜೈಶ್ರೀರಾಮ್, ಮೋದಿ ಘೋಷಣೆ!
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಧರ್ಮಸ್ಥಳಕ್ಕೆ ಆಗಮಿಸಿದ ವೇಳೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈಶ್ರೀರಾಮ್ ಮತ್ತು ಮೋದಿ ಪರ ಘೋಷಣೆ ಕೂಗಿದ ವಿದ್ಯಮಾನ ನಡೆಯಿತು.ಈಗ ಬೇಸಗೆ ರಜಾ ದಿನವಾದ ಕಾರಣ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗ್ಗಿನಿಂದಲೇ ದೇವಸ್ಥಾನದ ಪ್ರವೇಶ ದ್ವಾರದಿಂದಲೇ ಸರದಿ ಸಾಲಿನಲ್ಲಿ ಭಕ್ತರು ಸಾಗಿ ಬರುತ್ತಿದ್ದರು. ಸಿಎಂ, ಡಿಸಿಎಂ ಬರುತ್ತಲೇ ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನ 2.30ರ ಹೊತ್ತಿಗೆ ಸರತಿ ಸಾಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದು ಬೆಳಗ್ಗಿನಿಂದಲೇ ಅನ್ನಾಹಾರ ಬಿಟ್ಟು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಕಾದಿದ್ದ ಭಕ್ತರ ಅಸಮಾಧಾನಕ್ಕೆ ಕಾರಣವಾಯಿತು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬರುತ್ತಾರೆ ಎಂದು ತಿಳಿಯುತ್ತಲೇ ಜೈಶ್ರೀರಾಮ್ ಘೋಷಣೆ ಕೂಗಲಾರಂಭಿಸಿದರು. ಸಿಎಂ, ಡಿಸಿಎಂ ಆಗಮನವಾಗುತ್ತಿದ್ದಂತೆ ಜೋರಾಗಿ ಜೈ ಶ್ರೀರಾಮ್, ಮೋದಿ ಪರವಾಗಿ ಅಲ್ಲದೆ ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದೂ ಘೋಷಣೆ ಕೂಗಿದರು.