‘ಗೃಹಲಕ್ಷ್ಮಿ’ ಯೋಜನೆಯಿಂದ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ಹೆಮ್ಮೆಯಿಂದ ಫಲಾನುಭವಿಗಳು ಹೇಳಿಕೊಂಡರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದೊಂದಿಗೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ‘ಗೃಹಲಕ್ಷ್ಮಿ’ ಯೋಜನೆಯಿಂದ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆ, ಆರಂಭಿಸಿರುವ ವಿವಿಧ ಬಗೆಯ ಸ್ವ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮನೆಗೆ ಬೇಕಾದ ವಸ್ತುಗಳ ಖರೀದಿ, ಕುರಿ ಸಾಕಣೆ, ಹೈನುಗಾರಿಕೆ ಸೇರಿ ಹತ್ತಾರು ರೀತಿಯಲ್ಲಿ ಬದುಕು ಕಟ್ಟಿಕೊಂಡವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ಹೆಮ್ಮೆಯಿಂದ ಫಲಾನುಭವಿಗಳು ಹೇಳಿಕೊಂಡರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಆಯ್ದ ಫಲಾನುಭವಿಗಳ ಜೊತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಿಂದ ತಮಗಾಗಿರುವ ಹತ್ತು ಹಲವು ಪ್ರಯೋಜನೆಗಳು ಸೇರಿ ಬ್ಯಾಂಕ್‌ ಮತ್ತಿತರ ಕಡೆಯಿಂದ ಪಡೆದ ಸಾಲಕ್ಕೆ ಗೃಹಲಕ್ಷ್ಮಿ ಹಣ ಜಮೆ ಮಾಡಿಕೊಳ್ಳುತ್ತಿದ್ದಾರೆ. ಸ್ವಂತ ಮೊಬೈಲ್‌ ಫೋನ್‌ ಇಲ್ಲದ ಕಾರಣ ಕೆಲವರಿಗೆ ಗೃಹ ಲಕ್ಷ್ಮಿ ಹಣ ದೊರಕುತ್ತಿಲ್ಲ. ಹೊಸದಾಗಿ ಯೋಜನೆಗೆ ಸೇರ್ಪಡೆಗೊಳ್ಳಲು ಅವಕಾಶ ಕೊಡಬೇಕು. ಪ್ರತಿ ತಿಂಗಳು ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಒಬ್ಬ ಮಹಿಳೆ ತನ್ನ ಮಗ ಮೊದಲು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ, ಗೃಹಲಕ್ಷ್ಮಿ ಹಣದಿಂದ ಈಗ ಖಾಸಗಿ ಇಂಗ್ಲಿಷ್‌ ಮೀಡಿಯಂ ಶಾಲೆಗೆ ಸೇರಿಸಿದ್ದೇನೆ ಎಂದರು.

ಅಂಗನವಾಡಿ ಮಕ್ಕಳಿಗೆ ಯೂನಿಫಾರಂ:

ವಿಜಯಪುರ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ 50,000 ರು.ಗಳಲ್ಲಿ ಜರ್ಸಿ ಆಕಳು ಖರೀದಿಸಿ ಹೈನುಗಾರಿಕೆ ಮಾಡುತ್ತಿದ್ದೇನೆ. ಅಲ್ಲದೆ, ತಮ್ಮ ಮನೆ ಪಕ್ಕದಲ್ಲಿರುವ ಅಂಗನವಾಡಿಯ ಎಲ್ಲ ಮಕ್ಕಳಿಗೆ 30-35,000 ವೆಚ್ಚ ಮಾಡಿ ಯೂನಿಫಾರಂ, ಬ್ಯಾಗ್‌ ಕೊಡಿಸಿರುವುದಾಗಿ ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಪ್ಪಳ ನೀಡಿದ ಮಹಿಳೆ:

ದೊಡ್ಡಬಳ್ಳಾಪುರದ ಹಾರೂಡಿಯಿಂದ ಬಂದಿದ್ದ ಮಹಿಳೆಯೊಬ್ಬರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಗೃಹಲಕ್ಷ್ಮಿ ಯೋಜನೆಯಿಂದ ಹಪ್ಪಳ ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿ ಹುರುಳಿ ಕಾಳಿನ ಹಪ್ಪಳ ನೀಡಿದರು. ಆ ಹಪ್ಪಳವನ್ನು ಮನೆಗೆ ನೀಡುವಂತೆ ಕಚೇರಿ ಸಿಬ್ಬಂದಿಗೆ ಹೇಳಿದರು.

ಹಲವು ಸ್ವ ಉದ್ಯೋಗ:

ಚಿತ್ರದುರ್ಗದ ವಿಧವೆಯೊಬ್ಬರು, ರೊಟ್ಟಿ ಮಾರಿ ಬದುಕುತ್ತಿದ್ದ ತಾನು ಗೃಹಲಕ್ಷ್ಮಿ ಮೊತ್ತದಲ್ಲಿ ರೊಟ್ಟಿ ಯಂತ್ರ ಖರೀದಿಸಿ, ಇಬ್ಬರು ಸಹಾಯಕಿಯರ ನೆರವಿನಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದರೆ, ಬಳ್ಳಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಮಹೇಶ್ವರಿ, ಗೃಹಲಕ್ಷ್ಮಿ ಹಣದಲ್ಲಿ ವಾಷಿಂಗ್ ಮಷಿನ್, ಟಿವಿ ಮತ್ತಿತರ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿದೆ ಎಂದರು.

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು ಗಂಡಬೊಮ್ಮನಹಳ್ಳಿ ಪಂಚಾಯತಿಯ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಸ್ವಸಹಾಯ ಗುಂಪಿನ ಗೆಳತಿಯರು ಕುರಿ ಸಾಕಣಿಕೆ ಆರಂಭಿಸಿದ್ದು 5 ಕುರಿಯಿಂದ ಪ್ರಾರಂಭವಾಗಿ ಇಂದು 300 ಕುರಿಗಳನ್ನು ಸಾಕುತ್ತಿರುವುದಾಗಿ ಹೇಳಿದರು. ಕುರಿ ಮೇಯಿಸಲು ಐದು ಜನ ಗಂಡಸರಿಗೆ ಉದ್ಯೋಗ ನೀಡಿರುವುದಾಗಿ ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿದರು.

ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದಮ್ಮ:

ಸಂವಾದದ ನಡುವೆ ‘ಗೃಹಲಕ್ಷ್ಮಿ’ ಹಾಗೂ ‘ಶಕ್ತಿ’ ಯೋಜನೆ ಜಾರಿಗೆ ತಮ್ಮ ಸಂಬಂಧಿಯೊಬ್ಬ ಹಾಡಿದ ಹಾಡು ಕೇಳಿ ಈ ಯೋಜನೆ ಜಾರಿಗೆ ತಂದೆ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಬಂಧಿ ಪರಮೇಶ್‌ ಎಂಬುವರಿಗೆ ಫೋನ್‌ ಮಾಡಿ ಆ ಹಾಡು ಹಾಡುವಂತೆ ಹೇಳಿದರು. ಆಗ ಪರಮೇಶ್‌ ಅವರು ಹಾಡಿದ ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ.... ಹಾಡು ಕೇಳಿದ ಅನೇಕ ಮಹಿಳೆಯರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು.

ಅಣ್ಣನ ಋಣ ತೀರಿಸಿ:

ಸಂವಾದದ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, 2028ಕ್ಕೆ ವಿಧಾನಸಭೆ ಚುನಾವಣೆ ಬರಲಿದೆ. ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಶಿವಕುಮಾರ್‌ ಅಣ್ಣನ ಋಣ ತೀರಿಸಬೇಕು ಎಂದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಂವಾದಕ್ಕೆ ಆಗಮಿಸಿದ್ದ ಎಲ್ಲ ಮಹಿಳೆಯರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕ ಡಾ. ಮಹೇಶ್ ಬಾಬು ಉಪಸ್ಥಿತರಿದ್ದರು.

-ಬಾಕ್ಸ್-

ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಸಿಎಂ

ಕಲಬುರಗಿ ಮಹಿಳೆಯೊಬ್ಬರು ತೀರಾ ಬಡತನದ ಕುಟುಂಬದಿಂದ ಬಂದ ತಾನು ಗೃಹಲಕ್ಷ್ಮಿ ಯೋಜನೆಯ ಆರು ತಿಂಗಳ ಹಣ ಒಟ್ಟುಗೂಡಿಸಿ ಕರಕುಶಲ ವಸ್ತುಗಳನ್ನು ತಯಾರಿಸಿ ಬೇರೆ ಬೇರೆ ಕಡೆ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿ ಮಣಿಗಳಿಂದ ತಯಾರಿಸಿದ ಪುಟ್ಟ ತೊಟ್ಟಿಲು ಮತ್ತಿತರ ಕೃತಿಗಳನ್ನು ತೋರಿಸಿದರು. ಆಗ ತೊಟ್ಟಿಲಿಗೆ ಎಷ್ಟು ಬೆಲೆ ಎಂದು ಕೇಳಿದ ಸಿಎಂ 500 ರು. ನೀಡಿ ತೊಟ್ಟಿಲು ಖರೀದಿಸಿ ತನ್ನ ಮೊಮ್ಮಗಳಿಗೆ ನೀಡುವುದಾಗಿ ತಿಳಿಸಿದರು.