ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಗೆ ಕಾಡಾನೆ ಸ್ಥಳಾಂತರದಿಂದ ಸೃಷ್ಟಿಯಾಗಿರುವ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಡೆಯೊಡ್ಡಿದ್ದು, ಜಪಾನ್‌ ಪ್ರವಾಸದಿಂದ ಹಿಂತಿರುಗುವವರೆಗೆ ತಾಳ್ಮೆಯಿಂದಿರುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಗೆ ಕಾಡಾನೆ ಸ್ಥಳಾಂತರದಿಂದ ಸೃಷ್ಟಿಯಾಗಿರುವ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಡೆಯೊಡ್ಡಿದ್ದು, ಜಪಾನ್‌ ಪ್ರವಾಸದಿಂದ ಹಿಂತಿರುಗುವವರೆಗೆ ತಾಳ್ಮೆಯಿಂದಿರುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸೃಷ್ಟಿಯಾಗಿರುವ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ ಎನ್ನುವಂತೆ 10 ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು ಹಾಗೂ ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಮೂಡಿಗೆರೆ ಸೇರಿ ಇನ್ನಿತರ ಕಡೆಗೆ ಓಡಿಸಲಾಗಿದೆ. ಇದರಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ ಹಾಗೂ ಇದರಿಂದ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಚಿಕ್ಕಮಗಳೂರು ಶಾಸಕ ಎಚ್‌.ಡಿ. ತಮ್ಮಯ್ಯ ಸೇರಿದಂತೆ ಇತರರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೂ ಬಂದಿದ್ದರು.

ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಧ್ಯಪ್ರವೇಶಿಸಿದ್ದು ಜಪಾನ್‌ ಪ್ರವಾಸ ನಡುವೆಯೇ ರಾಜೀನಾಮೆ ನಿರ್ಧಾರ ಮಾಡಿದ್ದ ಶಾಸಕರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ಭಾಗದ ಶಾಸಕರೊಂದಿಗೆ ಮಾತನಾಡಿ, ಆನೆಗಳ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸುವಂತೆ ಸೂಚನೆ ನೀಡಿದ್ದೇನೆ. ನಾನು ಜಪಾನ್‌ನಿಂದ ವಾಪಾಸು ಬರುವವರೆಗೂ ತಾಳ್ಮೆಯಿಂದ ಇರಿ. ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸೂಚನೆ ನೀಡಿದ್ದಾರೆ.

ರಾಜೀನಾಮೆ ನಿರ್ಧಾರದಿಂದ

ಹಿಂದೆ ಸರಿದ ಕೈ ಶಾಸಕರು

ಖುದ್ದು ಮುಖ್ಯಮಂತ್ರಿ ಅವರೇ ದೂರವಾಣಿ ಕರೆ ಮಾಡಿ ಮಾತನಾಡಿರುವುದರಿಂದಾಗಿ ಚಿಕ್ಕಮಗಳೂರು ಭಾಗದ ಶಾಸಕರು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಆದರೂ, ಮಾಧ್ಯಮಗಳೆದುರು ತಮ್ಮ ಆಕ್ರೋಶವನ್ನು ಶಾಸಕರು ಹೊರ ಹಾಕಿದ್ದಾರೆ.

ಚಿಕ್ಕಮಗಳೂರು ಶಾಸಕ ಎಚ್‌.ಡಿ.ತಮ್ಮಯ್ಯ ಮಾತನಾಡಿ, ವನ್ಯಜೀವಿಗಳ ಪ್ರಾಣ ಎಷ್ಟು ಮುಖ್ಯವೋ, ನಮ್ಮ ಜಿಲ್ಲೆಯ ಜನರ ಪ್ರಾಣವೂ ಅಷ್ಟೇ ಮುಖ್ಯ. ಪ್ರಾಣಿಗಳನ್ನು ಉಳಿಸುವ ನೆಪದಲ್ಲಿ ಮನುಷ್ಯರ ಪ್ರಾಣ ಬಲಿಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ. ಆನೆಗಳನ್ನು ಸ್ಥಳಾಂತರಿಸುವುಕ್ಕೂ ಮುನ್ನ ಚುನಾಯಿತ ಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಚರ್ಚೆ ಮಾಡಬೇಕಿತ್ತು. ಆದರೆ, ಏಕಾಏಕಿ ನಿರ್ಧಾರ ಕೈಗೊಂಡು ಅರಣ್ಯ ಇಲಾಖೆ ಮತ್ತು ಸರ್ಕಾರ ತಪ್ಪು ನಡೆಯಿಟ್ಟಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ತಾಳ್ಮೆಯಿಂದಿರುವಂತೆ ಹೇಳಿದ್ದಾರೆ. ಹೀಗಾಗಿ ಸುಮ್ಮನಿರುತ್ತೇವೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ. ಶಾಸಕಿ ನಯನಾ ಮೋಟಮ್ಮ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ, ಉಳಿದ ಶಾಸಕರು ಚರ್ಚಿಸಿ ನಿರ್ಧರಿಸುತ್ತೇವೆ. 136 ಶಾಸಕರ ಬೆಂಬಲದಿಂದ ಸರ್ಕಾರ ಅಸ್ತಿತ್ವದಲ್ಲಿದೆ, ಒಬ್ಬ ಸಚಿವರಿಂದ ಸರ್ಕಾರ ನಡೆಯುತ್ತಿಲ್ಲ. ಆನೆ ಸ್ಥಳಾಂತರ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಮ್ಮ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದರು.

ಅರಣ್ಯ ಪ್ರದೇಶದ ಬಗ್ಗೆ ತಿಳಿದಿರುವವರನ್ನು ಅರಣ್ಯ ಸಚಿವರನ್ನಾಗಿ ಮಾಡಬೇಕು. ಆದರೆ, ಕಳೆದ 15 ವರ್ಷಗಳಿಂದೀಚೆಗೆ ಅರಣ್ಯದ ಬಗ್ಗೆ ಅರಿವಿಲ್ಲದವರನ್ನೇ ಸಚಿವರನ್ನಾಗಿ ಮಾಡಲಾಗಿದೆ. ಅರಣ್ಯ ಎಷ್ಟಿದೆ ಎಂಬುದೇ ಅವರಿಗೆ ತಿಳಿದಿಲ್ಲ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. ಇನ್ನು, ಹಾಸನ ಜಿಲ್ಲೆ ಉಸ್ತುವಾರಿ ಸಚಿವರಿಗೂ ಅರಣ್ಯದ ಬಗ್ಗೆ ಅರಿವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ತರೀಕೆರೆ ಶಾಸಕ ಶ್ರೀನಿವಾಸ್‌, ಮುಖ್ಯಮಂತ್ರಿಗಳು ನಮ್ಮೊಂದಿಗೆ ಮಾತನಾಡಿ ಸುಮ್ಮನಿರುವಂತೆ ಹೇಳಿದ್ದಾರೆ. ರಾಜೀನಾಮೆ ನೀಡಬೇಕು ಎಂದು ಸ್ಪೀಕರ್‌ ಅವರ ಸಮಯ ಕೇಳಿದ್ದೆವು. ಆದರೆ, ಮುಖ್ಯಮಂತ್ರಿ ಅವರು ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದಾರೆ. ಅವರ ಮಾತಿಗೆ ಗೌರವ ನೀಡುತ್ತೇವೆ. ಕೆಪಿಸಿಸಿ ಅಧ್ಯಕ್ಷರೊಂದಿಗೂ ಮಾತನಾಡಿದ್ದೇವೆ ಎಂದು ತಿಳಿಸಿದರು.