ಕಾಮಗಾರಿಗಳ ಹೆಸರು, ವಿವರಗಳನ್ನು ತಾಂತ್ರಿಕ, ನಿಖರವಾಗಿ ನಮೂದಿಸಿ ಅಧಿಕೃತ ಸಹಿಯೊಂದಿಗೆ ಸಲ್ಲಿಸಬೇಕು. ಯಾವುದೇ ಕರಡು ಪಟ್ಟಿಗಳನ್ನು ಪರಿಗಣಿಸಲಾಗುವುದಿಲ್ಲ. ಇಲಾಖೆಯಿಂದ ಪರಿಶೀಲಿಸಿ ದೃಢೀಕರಿಸಿದ ಅಧಿಕೃತ ಪಟ್ಟಿಗಳನ್ನೇ ಸಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅ.31ರಂದು ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ಶಂಕುಸ್ಥಾಪನೆಗೆ ಸಿದ್ಧವಾಗಿರುವ ಹಾಗೂ ಪೂರ್ಣಗೊಂಡು ಉದ್ಘಾಟನೆಗೆ ಅರ್ಹವಾಗಿರುವ ಕಾಮಗಾರಿಗಳ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳ ಹೆಸರು, ವಿವರಗಳನ್ನು ತಾಂತ್ರಿಕ, ನಿಖರವಾಗಿ ನಮೂದಿಸಿ ಅಧಿಕೃತ ಸಹಿಯೊಂದಿಗೆ ಸಲ್ಲಿಸಬೇಕು. ಯಾವುದೇ ಕರಡು ಪಟ್ಟಿಗಳನ್ನು ಪರಿಗಣಿಸಲಾಗುವುದಿಲ್ಲ. ಇಲಾಖೆಯಿಂದ ಪರಿಶೀಲಿಸಿ ದೃಢೀಕರಿಸಿದ ಅಧಿಕೃತ ಪಟ್ಟಿಗಳನ್ನೇ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು.ಸಿಎಂ ಕಾರ್ಯಕ್ರಮ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಇಲಾಖೆವಾರು ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ವೇದಿಕೆ, ಆಸನ ವ್ಯವಸ್ಥೆ, ಸಾರ್ವಜನಿಕರ ಪ್ರವೇಶ, ಕುಡಿಯುವ ನೀರು, ಆಹಾರ, ಸ್ವಚ್ಛತೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಸ್ಪಷ್ಟ ಹೊಣೆಗಾರಿಕೆಗಳನ್ನು ವಹಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಸಿದ್ಧವಾಗಿರುವ ಕಾಮಗಾರಿಗಳ ವಿವರಗಳನ್ನು ಸಂಬಂಧಪಟ್ಟ ಶಾಸಕರೊಂದಿಗೆ ಸಮನ್ವಯ ಸಾಧಿಸಿ ಅಂತಿಮಗೊಳಿಸಬೇಕು. ಕಾಮಗಾರಿಗಳ ಪ್ರಸ್ತುತ ಸ್ಥಿತಿ, ವೆಚ್ಚ ಹಾಗೂ ಇತರೆ ಅಗತ್ಯ ವಿವರಗಳನ್ನು ಇಲಾಖೆಗಳು ಪರಿಶೀಲಿಸಿ ಮಾಹಿತಿ ಸಲ್ಲಿಸಬೇಕು ಎಂದರು.ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಣೆ ಸವಲತ್ತುಗಳ ಬಗ್ಗೆಯೂ ಇಲಾಖಾವಾರು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಈಗಾಗಲೇ ಸೌಲಭ್ಯ ಪಡೆದವರ ಸಂಖ್ಯೆ, ಪ್ರಸ್ತುತ ವಿತರಣೆಗೆ ಸಿದ್ಧವಾಗಿರುವ ಸವಲತ್ತು ಸಂಖ್ಯೆ ಹಾಗೂ ಯೋಜನೆಗಳ ಪ್ರಗತಿ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಎಂದರು.
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸವಲತ್ತು ವಿತರಿವ ಜೊತೆಗೆ, ಜಿಲ್ಲೆಯಾದ್ಯಂತ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಎಷ್ಟು ಫಲಾನುಭವಿಗಳಿಗೆ ನೆರವು ತಲುಪಿಸಲಾಗುತ್ತಿದೆ ಎಂಬುದರ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದರು.ನಿಖರ ಅಂಕಿ-ಅಂಶಗಳು ಹಾಗೂ ಅಧಿಕೃತ ದಾಖಲೆಗಳೊಂದಿಗೆ ನಿಗದಿತ ಕಾಲಮಿತಿಯೊಳಗೆ ಮಾಹಿತಿ ಸಲ್ಲಿಸಬೇಕು. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಅಗತ್ಯ ಸಿದ್ಧತೆಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ.ಶೋಭಾರಾಣಿ, ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ, ಮಂಡ್ಯ ವಿವಿ ಕುಲಪತಿ ಕಲ್ಪಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.