ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಲೀಸ್ ನೀಡುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಗುವ ಸೂಚನೆ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಬೀದರ್

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಲೀಸ್ ನೀಡುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಗುವ ಸೂಚನೆ ಕಂಡುಬಂದಿದೆ.

ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಹರಾಜು ಹಾಕಬಾರದು, ಬದಲಿಗೆ ಲೀಸ್‌ಗೆ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ನೇತೃತ್ವದ ಪ್ರಮುಖರ ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗದಲ್ಲಿದ್ದ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ ಹಾಗೂ ರೈತ ಸಂಘದ ಮುಖಂಡರು ಸಿಎಂ ಅವರನ್ನು ಭೇಟಿಯಾಗಿ ಬಿ.ಎಸ್.ಎಸ್.ಕೆ ಕಾರ್ಖಾನೆಯ ಪ್ರಸ್ತುತ ಸ್ಥಿತಿ ಮತ್ತು ರೈತರ ಹಿತಾಸಕ್ತಿಯ ಕುರಿತು ಸುದಿರ್ಘವಾಗಿ ಚರ್ಚಿಸಿದರು.

ಸಹಕಾರ ಇಲಾಖೆ ಹಾಗೂ ಅಪೆಕ್ಸ್ ಬ್ಯಾಂಕ್‌ಗೆ ಸಿಎಂ ಸೂಚನೆ: ನಿಯೋಗದ ಮನವಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಕ್ಕರೆ ಕಾರ್ಖಾನೆಯನ್ನು ಹರಾಜು ಹಾಕುವ ಬದಲು ಲೀಸ್‌ಗೆ ನೀಡುವತ್ತ ಶೀಘ್ರ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆ, ಸಕ್ಕರೆ ಇಲಾಖೆ ಹಾಗೂ ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿ ಶರಾ ಬರೆದಿದ್ದಾರೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ರೈತರಲ್ಲಿ ಹೊಸ ಭರವಸೆ: ಕಾರ್ಖಾನೆಯನ್ನು ಹರಾಜು ಹಾಕಿದರೆ ಜಿಲ್ಲೆಯ ಸಾವಿರಾರು ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರಿಗೆ ತೀವ್ರ ನಷ್ಟವಾಗಲಿದೆ ಎಂಬ ಆತಂಕವಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳ ಸಕಾರಾತ್ಮಕ ಸ್ಪಂದನೆಯಿಂದಾಗಿ ಲೀಸ್ ಪ್ರಕ್ರಿಯೆಗೆ ವೇಗ ಸಿಗಲಿದ್ದು, ಶೀಘ್ರದಲ್ಲೇ ಬಿಎಸ್‌ಎಸ್‌ಕೆ ಕಾರ್ಖಾನೆಗೆ ಮರುಜೀವ ಸಿಗಲಿದೆ ಎಂಬ ಆಶಾಭಾವನೆಯನ್ನು ನಿಯೋಗ ಹಾಗೂ ಸ್ಥಳೀಯ ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್‌, ಅರವಿಂದ ಅರಳಿ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಮಾಜಿ ಜಿ.ಪಂ ಸದಸ್ಯ ವಿದ್ಯಾಸಾಗರ ಶಿಂಧೆ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ, ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಚಂದ್ರಶೇಖರ ಜಮಖಂಡಿ, ಪ್ರಕಾಶ ಬಾವಗೆ, ಮಲ್ಲಿಕಾರ್ಜುನ ಚಕ್ಕಿ, ಶಿವಕುಮಾರ ಸೈಬಣ್ಣ, ಮಲ್ಲಿಕಾರ್ಜುನ ಬಿ. ಕಟಗೆ, ಧೂಳಯ್ಯ ಸ್ವಾಮಿ, ಮಲ್ಲಿಕಾ ರ್ಜುನ ಎಸ್. ಭಂಡಾರಿ, ಅರ್ಜುನ ಲಾಡ್ಕರ್, ಅರ್ಜುನ ತಮಗಿಕರ್, ಜಾನಸನ್ ಬಾಬುಲಾಲ್ ಸೇರಿದಂತೆ ಇನ್ನಿತರರು ಇದ್ದರು.