12ರಂದು ಯುವನಿಧಿಗೆ ಸಿಎಂ ಚಾಲನೆ, ಯುವಸಮೂಹ ಪಾಲ್ಗೊಳ್ಳಲಿ: ಮಂಜುನಾಥಗೌಡ

| Published : Jan 10 2024, 01:46 AM IST

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಭರವಸೆ ಈಡೇರಿಸುವ ಉತ್ಸಾಹದಲ್ಲಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಲ್ಲಿ ಜ.12ರಂದು ಸಿಎಂ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾಗರದಲ್ಲಿ ಕಾಂಗ್ರೆಸ್ ಮುಖಂಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಕಾರ್ಯಕ್ರಮಕ್ಕೆ ಜ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಹಿಂದಿನ 4 ಗ್ಯಾರಂಟಿಗಳ ಫಲಾನುಭವಿಗಳು, ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.12 ಸ್ವಾಮಿ ವಿವೇಕಾನಂದರ ಜನ್ಮದಿನವಾಗಿದೆ. ಈ ಸುಸಂದರ್ಭದಲ್ಲಿ ಯುವಸಮೂಹಕ್ಕೆ ಯುವನಿಧಿಯಂತಹ ಪ್ರಯೋಜನಕಾರಿ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಸಚಿವರು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ ಎಂದರು.

ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು. ನಾವು ರಾಮನ ವಿರೋಧಿಗಳಲ್ಲ. ಅಯೋಧ್ಯೆಯಲ್ಲಿ ರಾಮಂದಿರ ಪ್ರತಿಷ್ಠಾಪನೆಯ ದಿನದಂದು ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಪಾನಕ, ಕೋಸಂಬರಿ ವಿತರಣೆ ಮಾಡಲಾಗುತ್ತದೆ. ರಾಮಭಕ್ತ ಗಾಂಧಿಯನ್ನು ಕೊಂದವರಿಂದ ರಾಮಭಕ್ತಿ ಉಪದೇಶ ಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿಯವರದ್ದು ಸುಳ್ಳಿನ ವ್ಯಾಪಾರವೇ ಹೊರತು, ಸತ್ಯ ಅವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದರೆ ಅರಣ್ಯ ಹಕ್ಕು ಮಿತಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಈಗ ಕೇಂದ್ರದಲ್ಲಿ ಎರಡು ಬಾರಿ ಅವರದ್ದೇ ಸರ್ಕಾರ ಆಡಳಿತದಲ್ಲಿದೆ. ಮಗ ಸಂಸದರಾಗಿದ್ದಾರೆ. ಆದರೂ ಕಾಯ್ದೆ ತಿದ್ದುಪಡಿ ಏಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ನಗರ ಅಧ್ಯಕ್ಷ ಐ.ಎನ್. ಸುರೇಶಬಾಬು, ಪ್ರಮುಖರಾದ ಮಧುಮಾಲತಿ, ತಸ್ರೀಫ್, ಲಲಿತಮ್ಮ, ಷಡಾಕ್ಷರಿ, ಶ್ರೀಕಾಂತ್ ಎಂ., ಕೌತಿ ಮಹಾಬಲ, ತಾರಾಮೂರ್ತಿ, ದಿನೇಶ್ ಡಿ., ಅನ್ವರ್ ಭಾಷಾ, ಗಿರೀಶ್ ಕೋವಿ ಇನ್ನಿತರರು ಹಾಜರಿದ್ದರು.

- - - (-ಫೋಟೋ: ಆರ್‌.ಎಂ.ಮಂಜುನಾಥಗೌಡ)