ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

| Published : Jan 19 2024, 01:49 AM IST / Updated: Jan 19 2024, 04:20 PM IST

CM Siddaramaih
ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ. ಬಸವಾದಿ ಶರಣರನ್ನು ನಾಡಿಗೆ ಪರಿಚಯಿಸುವ ಕಾರ್ಯಕ್ಕೆ ಸಿದ್ದರಾಮಯ್ಯ ಶ್ಲಾಘನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

12ನೇ ಶತಮಾನದಲ್ಲಿ ಜಾತಿ, ವರ್ಗ ರಹಿತವಾದ ಮತ್ತು ಮೂಢನಂಬಿಕೆಗಳು, ಕಂದಾಚಾರಗಳಿಂದ ವಿಮುಕ್ತವಾದ ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಬಸವಾದಿ ಶರಣರನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಸಮಯೋಚಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿದರು.

ಗುರುವಾರ ತೋಟಗಾರಿಕೆ ಇಲಾಖೆ ವತಿಯಿಂದ ಲಾಲ್‌ಬಾಗ್‌ ಗಾಜಿನಮನೆಯಲ್ಲಿ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆಧುನಿಕ ಜೀವನ ಪದ್ಧತಿಯಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ 12ನೇ ಶತಮಾನದ ವಚನ ಸಾಹಿತ್ಯ ಮೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ ಅಗತ್ಯವಾದ ಸಮಸಮಾಜದ ನಿರ್ಮಾಣದ ಮಹತ್ವವನ್ನು ಸಾರಿ ಹೇಳಿವೆ.

ಅಂತಹ ಶರಣರ ವಚನಗಳು, ಸಿದ್ಧಾಂತ ತತ್ವಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಈ ಫಲಪುಷ್ಪ ಪ್ರದರ್ಶನ ಏರ್ಪಾಡು ಮಾಡಿದ್ದು, ಜ.28ರವರೆಗೆ ಪ್ರದರ್ಶನ ನಡೆಯಲಿದೆ. ಇದನ್ನು ಜನಸಾಮಾನ್ಯರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುಮಾರು 70 ಬಗೆಯ ಹೂವಿನ ತಳಿಗಳ 30 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಅನುಭವ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಮೂಲಕ 12ನೇ ಶತಮಾನದ ಬಸವಾದಿ ಶರಣರ ಎಲ್ಲ ಸಂದೇಶಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. 

ಜೊತೆಗೆ ತೋಟಗಾರಿಕೆ ಇಲಾಖೆಯವರು ಯಾವ ಹೂವು, ಹಣ್ಣು ಬೆಳೆಯುತ್ತಾರೆ. ಇಲಾಖೆ ಕಾರ್ಯೋದ್ಧೇಶಗಳೇನು ಎಂಬಿತ್ಯಾದಿ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸರ್ಕಾರದ ಕಾರ್ಯದರ್ಶಿ ಡಾ। ಶಮ್ಲಾ ಇಕ್ಬಾಲ್‌, ನಿರ್ದೇಶಕ ರಮೇಶ್‌, ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್‌, ಉಪ ನಿರ್ದೇಶಕಿ ಕುಸುಮಾ ಉಪಸ್ಥಿತರಿದ್ದರು.

ಆನ್‌ಲೈನ್‌ನಲ್ಲೂ ಟಿಕೆಟ್‌ ಬುಕ್‌ ಮಾಡಿ: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆಂದು ಇದೇ ಮೊದಲ ಬಾರಿಗೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಿದೆ. 

ಆಸಕ್ತರು ವೆಬ್‌ಸೈಟ್‌: https://hasiru.karnataka.gov.in/flowershow/login.aspx ಸಂಪರ್ಕಿಸಿ ಆನ್‌ಲೈನ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ. ಬುಕ್ಕಿಂಗ್‌ ವ್ಯವಸ್ಥೆಯಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌, ಯುಪಿಐ, ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಹೀಗೆ ಎಲ್ಲ ಮಾದರಿಯಲ್ಲೂ ಪೇಮೆಂಟ್‌ ವ್ಯವಸ್ಥೆ ಕಲ್ಪಿಸಲಾಗಿದ್ದು ಸುಲಭವಾಗಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ.

ನಿಯಮ ಅನ್ವಯ: ವಯಸ್ಕರಿಗೆ ರಜಾ ದಿನಗಳಲ್ಲಿ ಟಿಕೆಟ್‌ಗೆ ತಲಾ ₹100, ಇತರೆ ದಿನಗಳಲ್ಲಿ ₹80 ಮತ್ತು 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ವಾರದ ಎಲ್ಲ ದಿನಗಳಲ್ಲಿ ಟಿಕೆಟ್‌ಗೆ ತಲಾ ₹30 ನಿಗದಿ ಮಾಡಲಾಗಿದೆ. 

ಆನ್‌ಲೈನ್‌ನಲ್ಲಿ ಬುಕ್‌ ಮಾಡಲಾದ ಟಿಕೆಟ್‌ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವ ವ್ಯವಸ್ಥೆಯಿಲ್ಲ. ಹಾಗೆಯೇ ಬುಕ್‌ ಮಾಡಿದ ಟಿಕೆಟ್‌ ರದ್ದುಪಡಿಸುವ ವ್ಯವಸ್ಥೆಯೂ ಇಲ್ಲಿಲ್ಲ. 

ಯಾವ ದಿನಕ್ಕೆಂದು ಟಿಕೆಟ್‌ ಬುಕ್‌ ಮಾಡಲಾಗಿದೆಯೋ ಅದೇ ದಿನಕ್ಕೆ ಮಾತ್ರ ಟಿಕೆಟ್ ಸೀಮಿತವಾಗಿರುತ್ತದೆ ಎಂದು ನಿಯಮಗಳು ಅನ್ವಯವಾಗುತ್ತವೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಕುಸುಮಾ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.