ಸಾರಾಂಶ
ಕೊಟ್ಟೂರು: ವಿರೋಧ ಪಕ್ಷ, ಇತರರು ಎಷ್ಟೇ ಅಪಪ್ರಚಾರ ಮಾಡಿದರೂ ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯ ಅವರ ಜತೆ ಇರುತ್ತಾರೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಹೇಳಿದರು.ಇಲ್ಲಿನ ಎಪಿಎಂಸಿ ಸಭಾ ಭವನದಲ್ಲಿ ಸರ್ಕಾರದಿಂದ ಎಪಿಎಂಸಿ ಆಡಳಿತಕ್ಕೆ ನಾಮ ನಿದೇರ್ಶನಗೊಂಡ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರಗಳು ಮಂಗಳವಾರ ಸಂಜೆ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಸನ್ಮಾನಿತಗೊಂಡು ಮಾತನಾಡಿದರು.
ಬಡವರ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ರಾಜ್ಯದ ಬಹುಸಂಖ್ಯಾತ ಜನತೆ ಒಪ್ಪಿಕೊಂಡು ಆಶೀರ್ವದಿಸಿದ್ದಾರೆ. ಈ ಮೂಲಕ ನಿರಂತರವಾಗಿ ಸಿದ್ದರಾಮಯ್ಯನವರ ಬೆಂಬಲಕ್ಕೆ ಸದಾ ಇರುವುದಾಗಿ ಘೋಷಿಸಿರುವುದು ಇತ್ತೀಚೆಗೆ ನಡೆದ ಮೂರು ಉಪ ಚುನಾವಣೆಗಳ ಫಲಿತಾಂಶ ಮತ್ತೊಮ್ಮೆ ಸಾಬೀತು ಪಡಿಸಿದೆ.ಜನತೆಗೆ ಒಳಿತಾಗುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತಾ ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಯಾವುದೇ ಹಂತದಲ್ಲಿ ರೈತರಿಗೆ ತೊಂದರೆಯಾಗದಂತೆ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದರು.
ಕೊಟ್ಟೂರು ಎಪಿಎಂಸಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ವಹಿವಾಟು ನಡೆಸುತ್ತಅ ಬಂದಿದೆ. ಜೊತೆಗೆ ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದೆ. ಇಲ್ಲಿನ ಆಡಳಿತವನ್ನು ಜನತೆ ಮೆಚ್ಚಲು ಕಾರಣವಾಗಿದೆ ಎಂದರು.ಕೆಎಂಎಫ್ ಅಧ್ಯಕ್ಷ ಎಸ್.ಭೀಮಾ ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೊಟ್ಟೂರು ಎಪಿಎಂಸಿಗೆ ₹4 ಕೋಟಿ ಅನುದಾನ ನೀಡಿದ್ದೆ. ಈ ಅನುದಾನ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಸಮಿತಿಗೆ ನೆರವಾಗಿದೆ. ಕೊಟ್ಟೂರು ಹೊರವಲಯದಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದ ಹೊಸ ಎಪಿಎಂಸಿ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಶಾಸಕ ಡಾ.ಎನ್.ಟಿ ಶ್ರೀನಿವಾಸ ಜೊತೆ ಸೇರಿ ಒತ್ತಡ ಹಾಕುವೆ ಎಂದರು.
ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ ಮನವಿ ಸಲ್ಲಿಸಿದರು.ಉಪಾಧ್ಯಕ್ಷ ಎಂ.ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಟ್ಟೂರು ಎಪಿಎಂಸಿಗೆ ಅರ್ಧ ಶತಮಾನದ ಉತ್ತಮ ಇತಿಹಾಸ ಇದೆ. ಎಲ್ಲ ಬಗೆಯ ವ್ಯಾಪಾರ-ವಹಿವಾಟು ಪಾರದರ್ಶಿಕವಾಗಿ ನಡೆದು ರೈತರಿಗೆ ಮತ್ತಷ್ಟು ಬಗೆಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದ ನೆರವು ಕೋರುವೆ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್ ಸ್ವಾಗತಿಸಿದರು. ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಎಸ್.ಕೊಡದಪ್ಪ ವೀರೇಶ್, ನಾಗರಾಜ, ಸಂಗಮೇಶ್ವರ, ಶಾಂತನಗೌಡ, ಚಿರಿಬಿ ಕೊಟ್ರೇಶ್, ಕೆ.ಶಿವಕುಮಾರ ಗೌಡ , ಎಂ.ಯು. ಕೊಟ್ರಯ್ಯ, ಪಪಂ ಅಧ್ಯಕ್ಷೆ ರೇಖಾ ರಮೇಶ, ಚಾಪಿ ಚಂದ್ರಪ್ಪ, ಬಿ.ಮರಿಸ್ವಾಮಿ, ಸಾವಜ್ಜಿ ರಾಜೇಂದ್ರ ಪ್ರಸಾದ್, ಗೂಳಿ ಮಲ್ಲಿಕಾರ್ಜುನ, ಕಲ್ಲನಗೌಡ, ಎಪಿಎಂಸಿ ಕಾರ್ಯದರ್ಶಿ ಎ.ಕೆ. ವೀರಣ್ಣ, ಬಸವರಾಜ, ಅಡಿಕೆ ಮಂಜುನಾಥ, ರಾಂಪುರ ಭರಮಪ್ಪಇದ್ದರು.