ಸಾರಾಂಶ
ಹೊಸಪೇಟೆ: ಕಳೆದ ಆಗಸ್ಟ್‌ನಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರು. ಹೆಚ್ಚಳ ಮಾಡಿ ನೇರ ರೈತರ ಬ್ಯಾಂಕ್ ಅಕೌಂಟ್‌ಗೆ ಹಾಕಲಾಗುತ್ತಿದೆ. ಮತ್ತೆ ದರ ಹೆಚ್ಚಳದ ಬಗ್ಗೆ ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ನೀಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಂದಿನಿ ಹಾಲಿಗೆ ಲೀಟರ್‌ಗೆ ₹೩೯ ಇದ್ದುದ್ದನ್ನು ₹೪೨ಕ್ಕೆ ಏರಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ರೈತರ ಖಾತೆಗೆ ₹೩ ನೇರ ಜಮೆ ಮಾಡಲಾಗುತ್ತಿದೆ ಎಂದರು.ಅಮುಲ್ ಸೇರಿದಂತೆ ಇತರೆ ಉತ್ಪನ್ನಗಳ ದರ ಹೆಚ್ಚಳ ಇದೆ. ದಿಲ್ಲಿ, ಹರ್ಯಾಣ, ಮಹಾರಾಷ್ಟದಲ್ಲಿ ಲೀ. ₹೫೬ ಹಾಲಿನ ದರ ಇದೆ. ಕರ್ನಾಟಕದಲ್ಲಿ ಮಾತ್ರ ನಂದಿನಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳ ಬೇಡಿಕೆ ಇದೆ. ಈ ಬಗ್ಗೆ ಪಶುಸಂಗೋಪನೆ ಸಚಿವರು ಸದನದಲ್ಲಿ ಹೇಳಿಕೆ ನೀಡಿರಬಹುದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದುವರೆಗೆ ನಮಗೆ ಹಾಲಿನ ದರ ಏರಿಕೆಗೆ ಸೂಚನೆ ನೀಡಿಲ್ಲ. ಹಾಗಾಗಿ ಪಶುಸಂಗೋಪನೆ ಸಚಿವರ ಜತೆಗೆ ಚರ್ಚಿಸಿ ವಿಷಯ ತಿಳಿದುಕೊಳ್ಳುವೆ.
ಜನವರಿಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪ ಇಲ್ಲ. ಈಗ ನಾಲ್ಕೈದು ತಿಂಗಳ ಹಿಂದೆ ಹಾಲಿನ ದರ ಏರಿಕೆ ಮಾಡಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದರ ಏರಿಕೆ ಬಗ್ಗೆ ಇನ್ನೂ ಸೂಚನೆ ನೀಡಿಲ್ಲ ಎಂದರು.ಕೆಎಂಎಫ್ ಉತ್ಪನ್ನಗಳ ಮಾರಾಟಕ್ಕೆ ನಾವು ಏಜೆನ್ಸಿಗಳಿಗೆ ಟಾರ್ಗೆಟ್ ನೀಡುತ್ತೇವೆ. ಇದರಲ್ಲಿ ಯಾವುದೇ ಲೋಪ ಇಲ್ಲ. ನಾವು ಉತ್ಪನ್ನ ಮಾರಾಟ ಮಾಡಿದರೆ, ರೈತರಿಗೆ ಅನುಕೂಲವಾಗಲಿದೆ ಎಂದರು.