ಸಾರಾಂಶ
ಬ್ಯಾಡಗಿ: ಎಫ್ಐಆರ್ ಪ್ರತಿಯನ್ನೂ ನ್ಯಾಯಾಲಯಕ್ಕೆ ಕೊಡದೇ ಶ್ರೀಕಾಂತ್ ಪೂಜಾರಿ ಬಂಧಿಸಿದ್ದು ಸದರಿ ಪ್ರಕರಣದಿಂದ ರಾಜ್ಯದ ಇತಿಹಾಸದಲ್ಲಿಯೇ ಒಬ್ಬ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಮಹಾನ್ ಸುಳ್ಳುಗಾರರು ಎನ್ನೋದು ಗೊತ್ತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಮೋಟೇಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದೇ ಬಹುದೊಡ್ಡ ಅಪರಾಧ, ತಪ್ಪು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ತಪ್ಪು ಮಾಡದವರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಅಹಂಕಾರದಿಂದ ನಮ್ಮನ್ನೇ ಪ್ರಶ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಇಬ್ಬರೂ ಕ್ಷಮೆ ಕೇಳಲಿ: ಶ್ರೀಕಾಂತ್ ಪೂಜಾರಿ ಮೇಲೆ ರಾಮಮಂದಿರ ಹೋರಾಟದ ಕೇಸ್ ಹೊರತುಪಡಿಸಿ ಇನ್ಯಾವುದೇ 16 ಕೇಸ್‌ಗಳು ಇರಲಿಲ್ಲ, ಈ ಕುರಿತು ನ್ಯಾಯಾಲಯವು ಕೂಡ ಸ್ಪಷ್ಟವಾಗಿ ಹೇಳಿದೆ. ದಲಿತ ಸಮುದಾಯದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ ಮಾಡಿದ ಎಷ್ಟು ಜನರ ವಿರುದ್ಧ ಕ್ರಮಗಳಾಗಿವೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ ಅವರು, ಭಂಡತನ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ರಾಜ್ಯದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಶ್ರೀಕಾಂತ್ ಪೂಜಾರಿಯಂತಹ ಲಕ್ಷಾಂತರ ಹಿಂದೂ ಕಾರ್ಯಕರ್ತರು ಜಗದೀಶ ಶೆಟ್ಟರ ಅವರನ್ನು ಸೋಲದಂತೆ ನೋಡಿಕೊಂಡು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ಹೋದ ತಕ್ಷಣ ಹಿಂದೂಗಳ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರೇ ಮುಖಮಂತ್ರಿ ಆಗಿದ್ದಾಗ ಕೇಸ್ ಏಕೆ ವಾಪಸ್ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.ಸಿದ್ದು ಪುತ್ರನ ಪಾಕ್ ಪ್ರೀತಿ: ಸಿದ್ಧರಾಮಯ್ಯ ಮಗ ಡಾ.ಯತೀಂದ್ರನಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ ಆಗಿದೆ. ಹಿಂದೂ ರಾಷ್ಟ್ರವಾದರೆ ಭಾರತವೂ ಪಾಕಿಸ್ತಾನದಂತೆ ಆಗಲಿದೆ ಎಂಬ ಹೇಳಿಕೆಗಳು ಅವರಲ್ಲಿರುವ ಅಪ್ರಭುದ್ದತೆ ತೋರುತ್ತದೆ. ಕೆಲ ದಿನ ಅವರು ಪಾಕಿಸ್ಥಾನಕ್ಕೆ ಹೋಗಿ ಬರುವುದು ಉತ್ತಮ ಎಂದು ಸಲಹೆ ನೀಡಿದರು.
ರಾಮಮಂದಿರ ಕಟ್ಟಿದ ಮೇಲೆ ಕಾಂಗ್ರೆಸ್ ನವರಿಗೆ ವಾಲ್ಮೀಕಿ ಮಹರ್ಷಿಗಳ ನೆನಪಾಗಿದೆ. ರಾಜಕೀಯ ಮಾಡುವ ದುರುದ್ದೇಶ ಇದರಲ್ಲಡಗಿದೆ. ದೇಶದ ಯಾವುದೇ ಮುಖ್ಯಮಂತ್ರಿಗಳನ್ನು ಈವರೆಗೂ ಅಯೋಧ್ಯೆಗೆ ಆಹ್ವಾನ ನೀಡಿಲ್ಲ. ಇದೀಗ ನಮಗೆ ಆಹ್ವಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದರು.