ಹಂಪಿಯಲ್ಲಿ ನ. 2ರಂದು ಕರ್ನಾಟಕ ಸಂಭ್ರಮಕ್ಕೆ ಸಿಎಂ ಚಾಲನೆ

| Published : Oct 19 2023, 12:46 AM IST

ಸಾರಾಂಶ

ಕರ್ನಾಟಕ ನಾಮಕರಣಕ್ಕೆ 50ರ ಸಂಭ್ರಮ ಹಿನ್ನೆಲೆಯಲ್ಲಿ ನ. 2ರಂದು ಹಂಪಿಯಲ್ಲಿ ಕರ್ನಾಟಕ ಸಂಭ್ರಮ ಜ್ಯೋತಿರಥ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. 2ರಂದು ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಕರ್ನಾಟಕ ಸಂಭ್ರಮ ಜ್ಯೋತಿರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹೆಸರಿಟ್ಟು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಹಂಪಿಯ ನೆಲದಿಂದಲೇ ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಂಭ್ರಮ 1973ರ ಇತಿಹಾಸ ಹಂಪಿಯಲ್ಲಿ ಮತ್ತೆ ಮರುಕಳಿಸುವಂತೆ ಮಾಡಬೇಕಿದೆ. ರಾಜ್ಯಕ್ಕೆ ಮೈಸೂರು ಎಂದು ಹೆಸರು ಇರಲಿ ಎಂದು ಒತ್ತಡ ಇದ್ದರೂ ಆಗಿನ ಸಿಎಂ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಹಂಪಿಯಿಂದಲೇ ಕರ್ನಾಟಕ ನಾಮಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಹಂಪಿಯಿಂದ ಗದಗಕ್ಕೆ ಜ್ಯೋತಿರಥ ಯಾತ್ರೆ ತೆರಳಿತ್ತು. ಈಗ ಅದೇ ಮಾದರಿಯಲ್ಲಿ 50 ವರ್ಷದ ಹಿಂದೆ ನಡೆದ ಕಾರ್ಯಕ್ರಮ ಮರುಕಳಿಸುವಂತೆ ಹಂಪಿಯಿಂದ ನ. 2ರಂದು ಜ್ಯೋತಿ ರಥಯಾತ್ರೆ ಕೊಪ್ಪಳದ ಮಾರ್ಗವಾಗಿ ಗದಗಗೆ ತೆರಳಲಿದೆ ಎಂದರು.

ಸೌಹಾರ್ದ ಸಂದೇಶ:

ಹಂಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಸಂದೇಶ ಓದಲಾಗುವುದು. ನಾವೆಲ್ಲರೂ ಒಂದು ಎಂಬ ಸೌಹಾರ್ದದ ಸಂದೇಶ ಸಾರಲಾಗುವುದು. ಆಗಿನ ಕಾರ್ಯಕ್ರಮದಲ್ಲೂ ಈ ಸಂದೇಶ ಸಾರಲಾಗಿತ್ತು. ಜತೆಗೆ ಸಾಮೂಹಿಕ ಪ್ರತಿಜ್ಞೆ ಸ್ವೀಕಾರ ಮಾಡಲಾಗುವುದು ಎಂದರು.

ಎದುರು ಬಸವಣ್ಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐದು ಕನ್ನಡದ ಗೀತೆಗಳು ಮೊಳಗಲಿವೆ. ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಗುವುದು. ಜತೆಗೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿವೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ಮತ್ತು ಎದುರು ಬಸವಣ್ಣ ಮಂಟಪದ ಬಳಿಯ ಧ್ವಜಸ್ತಂಭದ ಬಳಿ ಜ್ಯೋತಿ ಬೆಳಗಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ವಿದ್ಯುದೀಪಾಲಂಕಾರ ಮಾಡಿ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.

ಹಂಪಿಯಿಂದ ಕನ್ನಡ ಜ್ಯೋತಿರಥ ಯಾತ್ರೆ:

ಹಂಪಿಯಿಂದ ಗದಗಗೆ ತೆರಳುವ ಜ್ಯೋತಿರಥಯಾತ್ರೆ ಸಾಗುವ ಮಾರ್ಗದಲ್ಲಿ ಶಿಷ್ಟಾಚಾರ ಪಾಲನೆ ಮಾಡಬೇಕು. ವಿಜಯನಗರದ ಗಡಿ ದಾಟುತ್ತಿದ್ದಂತೆಯೇ ಕೊಪ್ಪಳದ ಜಿಲ್ಲಾಡಳಿತ ಬರ ಮಾಡಿಕೊಳ್ಳಲಿದೆ. ಬಳಿಕ ಗದಗ ಜಿಲ್ಲಾಡಳಿತ ಬರಮಾಡಿಕೊಳ್ಳಲಿದ್ದು, ಗದುಗಿನ ವೀರನಾರಾಯಣ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಸನ್ಮಾನಿಸಲಾಗುವುದು ಎಂದರು.

ಈ ಕನ್ನಡ ಜ್ಯೋತಿರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ಈ ನವೆಂಬರ್‌ನಿಂದ ಮುಂದಿನ ವರ್ಷ ನವೆಂಬರ್‌ ವರೆಗೆ ವರ್ಷದುದ್ದಕ್ಕೂ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿಧಾನಸೌಧದಲ್ಲಿ ಅವಿಸ್ಮರಣೀಯ ಕಾರ್ಯಕ್ರಮ ನಡೆಯಲಿದೆ. ಈ ಹಿಂದಿನ ಸರ್ಕಾರವೇ ಕಾರ್ಯಕ್ರಮ ರೂಪಿಸಬೇಕಿತ್ತು. ಕಾರಣಾಂತರದಿಂದ ಈ ಕಾರ್ಯಕ್ರಮ ನಡೆಸಿಲ್ಲ, ನಾವು ಸಾಹಿತಿಗಳು, ಕಲಾವಿದರು, ಪತ್ರಕರ್ತರು ಸೇರಿದಂತೆ ಚಿಂತಕರ ಸಲಹೆ ಪಡೆದು ಕಾರ್ಯಕ್ರಮ ರೂಪಿಸಿದ್ದೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದ್ದು, 50 ವರ್ಷದ ಬಳಿಕ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಸಚಿವ ಜಮೀರ್‌ ಅಹಮದ್ ಖಾನ್‌, ಶಾಸಕರಾದ ಗವಿಯಪ್ಪ, ಜೆ.ಎನ್‌. ಗಣೇಶ್, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್, ಜಿಪಂ ಸಿಇಒ ಸದಾಶಿವಪ್ರಭು, ಎಸ್ಪಿ ಶ್ರೀಹರಿಬಾಬು, ಸಹಾಯಕ ಆಯುಕ್ತ ಮೊಹಮ್ಮದ್‌ ಅಲಿ ಅಕ್ರಮ್‌ ಶಾ ಮತ್ತಿತರರಿದ್ದರು.