ಸಾರಾಂಶ
ಕನ್ನಡಪ್ರಭವಾರ್ತೆ ಮದ್ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುರುಬ ಸಮಾಜದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ತಾಲೂಕು ಕುರುಬರ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.ತಾಲೂಕು ಕುರುಬರ ಸಂಘದ ಅಶ್ವಿನ್ ರಾಮಕೃಷ್ಣ ಮತ್ತು ಗೌರವಾಧ್ಯಕ್ಷ ಎಂ.ಮರಿ ಹೆಗ್ಗಡೆ ನೇತೃತ್ವದಲ್ಲಿ ಸಂಘದ ಆವರಣದಿಂದ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕುರುಬ ಸಮಾಜ ಮತ್ತು ಮಂಡ್ಯ ಜಿಲ್ಲೆಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ಮಂಡ್ಯ ತಾಲೂಕು ಬಸರಾಳು ಗ್ರಾಮದ ಹೇಮಾವತಿ ಬಡಾವಣೆಯಲ್ಲಿ ಶಾನುಭೋಗನಹಳ್ಳಿ ಕುಮಾರ್ ಮತ್ತು ಬನ್ನಹಟ್ಟಿಯ ಮಹೇಶ್ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.ಧರಣಿ ವೇಳೆ ಮಾತನಾಡಿದ ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣ, ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತ ಅವಧಿಯಲ್ಲಿ ಕೇವಲ ಕುರುಬ ಸಮಾಜಕ್ಕೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಈ ಇಬ್ಬರು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿ ಸಿದ್ದರಾಮಯ್ಯ ಮತ್ತು ನಮ್ಮ ಸಮಾಜಕ್ಕೆ ಕಳಂಕ ಬರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ಸಂಘದ ಗೌರವಾಧ್ಯಕ್ಷ ಎಂ.ಮರಿಹೆಗಡೆ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಮಂಡ್ಯ ಜಿಲ್ಲೆ ಬಗ್ಗೆಯೂ ಕಿಡಿಗೇಡಿಗಳು ಲಘುವಾಗಿ ಮಾತನಾಡುವ ಮೂಲಕ ಜಿಲ್ಲೆಯ ಜನರ ಸಾಮರಸ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೂಡಲೇ ಸಿಎಂ ಮತ್ತು ಕುರುಬ ಸಮಾಜದ ಬಗ್ಗೆ ಲಘುವಾಗಿ ಮಾತನಾಡಿರುವ ಕುಮಾರ ಮತ್ತು ಮಹೇಶ್ ಅವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಪುಲ್ಲ ಚಂದ್ರ, ಕಾರ್ಯದರ್ಶಿ ಎಚ್.ರಾಜು, ಲಿಂಗನದೊಡ್ಡಿ ರಾಮಕೃಷ್ಣ, ಜವರಾಯಿ ಹೆಗ್ಡೆ, ಮನುಕುಮಾರ, ಕರಿಯಪ್ಪ, ಕುಮಾರ ಹೆಗಡೆ, ಚಿಕ್ಕಮ್ಮ, ಶಿವಬೀರಯ್ಯ, ಕಿರಣ್, ರಾಜು, ರಮೇಶ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.