ಸಾರಾಂಶ
ಗದಗ: ಅ.15 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯವಾಗಿ ಸಭೆ ಕರೆದಿದ್ದು, ಆ ಸಭೆಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ, ಒಂದೊಮ್ಮೆ ನ್ಯಾಯ ಸಿಗದೇ ಇದ್ದಲ್ಲಿ ಹತ್ತಾರು ಸಾವಿರ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಯುತ ನಮ್ಮ ಹೋರಾಟ ತೀವ್ರಗೊಳಿಸಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆಸಿದ ವಕೀಲರ ಪರಿಷತ್ ಹೋರಾಟದ ವೇಳೆ ಶಾಸಕ ವಿನಯ ಕುಲಕರ್ಣಿ ಮೂಲಕ ಮುಖ್ಯಮಂತ್ರಿಗಳು ಮಾತನಾಡಿ, ಅ.15 ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಇದುವರೆಗೂ ಸ್ಥಳ ಮತ್ತು ಸಮಯ ನಿಗದಿಯಾಗಿಲ್ಲ, ಅದನ್ನು ಕೂಡಾ ಕೂಡಲೇ ನಿಗದಿ ಮಾಡಿ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಮಾಧ್ಯಮದ ಮೂಲಕ ಒತ್ತಾಯಿಸುತ್ತೇನೆ. ಶನಿವಾರ ಗದಗ ನಗರದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ದುಂಡು ಮೇಜಿನ ಸಭೆ ಯಶಸ್ವಿಯಾಗಿದೆ. ಸಭೆಯಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಸಿಎಂ ಬಳಿ ಹೋಗಲು ಅನೇಕ ಸಲಹೆ ಸೂಚನೆ ನೀಡಿದ್ದಾರೆ. ಪಂಚಮಸಾಲಿ ಹೋರಾಟ ನಿಂತ ನೀರಲ್ಲ. ಅದು ಹರಿಯುವ ಗಂಗೋತ್ರಿ ಇದ್ದಂತೆ. ಈಗಾಗಲೇ 6 ಬಾರಿ ಹೋರಾಟ ಮಾಡಿ ಈಗ 7 ನೇ ಬಾರಿ ಹೋರಾಟಕ್ಕೆ ಅಣಿಯಾಗಿದ್ದೇವೆ. ಸದನದಲ್ಲಿ ಪಂಚಮಸಾಲಿ ಶಾಸಕರ ದ್ವನಿ ಅಡಗಿಸಲಾಗಿದೆ. ಬೆಳಗಾವಿಯಲ್ಲಿ ವಕೀಲರ ಪ್ರಥಮ ಸಮ್ಮೇಳನ ಯಶಸ್ವಿಯಾಗಿದ್ದು, ಸಮಾಜದ 2 ಸಾವಿರ ವಕೀಲರು ಸಭೆಯಲ್ಲಿ ಹಾಜರಿದ್ದು ಸರ್ಕಾರಕ್ಕೆ ಗಟ್ಟಿ ಧ್ವನಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಮೇಲೆ ನಮ್ಮ ಸಮಾಜದ ಋಣ ಇದೆ. ಅದನ್ನು ತೀರಿಸಬೇಕು. ದೇಶದ ಮೀಸಲಾತಿ ಎನ್ನುವ ಒಂದು ರೊಟ್ಟಿ ಇದ್ದಂತೆ ಅದರಲ್ಲಿಯ ಒಂದು ತುಣುಕು ಪಂಚಮಸಾಲಿಗಳಿಗೂ ನೀಡಬೇಕು ಎನ್ನುವುದು ಎಲ್ಲರ ಹಕ್ಕೊತ್ತಾಯವಾಗಿದೆ. ಅ.15 ರಂದು ನಡೆಯುವ ಸಭೆ ನಮ್ಮ ಸಮುದಾಯದ ಎಲ್ಲ ಶಾಸಕರು ಹಾಜರಾಗಿ ಸಿಎಂ ಮನ ಒಲಿಸುವ ಪ್ರಯತ್ನ ಮಾಡಬೇಕು ಎಂದರು.
ಜಾತಿ ಜನಗಣತಿ ವಿಷಯವಾಗಿ ಸಧ್ಯ ನಡೆಯುತ್ತಿರುವ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈಗಾಗಲೇ ಕಾಂತರಾಜ ವರದಿಯ ಬಗ್ಗೆ ಲಿಂಗಾಯತ ಸಮುದಾಯದ 72 ಜನ ಶಾಸಕರು ಅಪರಸ್ಪರ ಎತ್ತಿದ್ದಾರೆ. ನಾಡಿನ ಹಲವಾರು ಮಠಾಧೀಶರು ಕೂಡಾ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅದು ವೈಜ್ಞಾನಿಕವಾಗಿಲ್ಲ ಎನ್ನುವ ಅಭಿಪ್ರಾಯ ನನ್ನದೂ ಇದೆ. ಅದು ಸೂಕ್ತ ಮತ್ತು ವೈಜ್ಞಾನಿಕವಾಗಿ ನಡೆಯಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಸಿಎಂ ನಾವು ಕರೆದಲ್ಲಿ ಬಂದು ಚರ್ಚಿಸುತ್ತಿದ್ದರು. ಈಗಿನ ಸಿಎಂ ಅವರನ್ನು ಮಾತನಾಡಿಸುವುದು ಕೂಡಾ ಭಯ ಬರುತ್ತಿದೆ ಎನ್ನುವ ಶ್ರೀಗಳ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯ ಮೃತ್ಯುಂಜಯ ಶ್ರೀಗಳು, ಹೌದು ಈ ಹಿಂದೆ ಸದನದಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈಗಿನ ಸ್ಪೀಕರ್ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಮ್ಮ ಸಮುದಾಯದ ಶಾಸಕರು ಮಾತನಾಡುತ್ತಿಲ್ಲ ಸಹಜವಾಗಿಯೇ ಬೇಸರವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಎಸ್. ನೇಗಿನಹಾಳ, ಆರ್.ಸಿ. ಪಾಟೀಲ, ಎಸ್.ಬಿ.ಪಾಟೀಲ, ಸಿ.ಎಸ್. ಪಾಟೀಲ, ಕೆ. ಶಿವಲಿಂಗಪ್ಪ, ರವೀಂದ್ರ ಶಾಬಾರಿ, ಸಿದ್ಧನಗೌಡ ಪಾಟೀಲ, ದೊಡ್ಡಬಸಪ್ಪ, ಕೆ.ಎಲ್. ಕರೆಗೌಡ್ರ, ಜಿ.ಎನ್. ಸಂಶಿ, ವಿಜಯಲಕ್ಷ್ಮಿ ಅಂಗಡಿ, ಎಸ್. ವೈ. ಕಲ್ಲಾಪುರ, ಎಂ.ಎ. ಸಂಗನಾಳ, ಸಿದ್ದನಗೌಡ, ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ, ಅನಿಲ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ 10 ಜನ ಹಿರಿಯ ವಕೀಲರ ತಂಡ ನೇಮಕ ಮಾಡಲಾಗಿದೆ. ಅವರೇ ಮುಖ್ಯಮಂತ್ರಿಗಳೊಂದಿಗೆ ಎಲ್ಲ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.