ಸಾರಾಂಶ
ಬೆಂಗಳೂರು : ‘ಶಾಸಕರು ಹಾಗೂ ಉಸ್ತುವಾರಿ ಸಚಿವರು ಕ್ಷೇತ್ರದ ಕಾಮಗಾರಿಗಳ ಸಮಸ್ಯೆ, ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಕೆಡಿಪಿ ಸಭೆಗಳಲ್ಲೇ ಬಗೆಹರಿಸಿಕೊಳ್ಳಬೇಕು. ಕೇಂದ್ರದ ಅಸಹಕಾರ, ಹಿಂದಿನ ಸರ್ಕಾರದ ಆರ್ಥಿಕ ದುರಾಡಳಿತ, ಅಶಿಸ್ತುಗಳ ನಡುವೆಯೂ ನಿಮಗೆ ತಲಾ ₹50 ಕೋಟಿ ನೀಡುತ್ತಿದ್ದೇವೆ. ಇದನ್ನು ಶೇ.100 ರಷ್ಟು ಸದ್ಬಳಕೆ ಮಾಡಿಕೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರ ಸಮಸ್ಯೆ ಆಲಿಸಿ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಎರಡನೇ ದಿನವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 9 ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದರು.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಡೆದ ಮ್ಯಾರಥಾನ್ ಸಭೆಗಳಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.-ಬಾಕ್ಸ್-
ರಾಜು ಕಾಗೆ ಹಾಜರು, ಬಿ.ಆರ್.ಪಾಟೀಲ್ ಗೈರು
ಸರಣಿ ಸಭೆಗಳ ಸರ್ಕಸ್ಸಿನ ಕೇಂದ್ರ ಬಿಂದುಗಳಾದ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಪೈಕಿ ರಾಜು ಕಾಗೆ ಸಭೆಗೆ ಹಾಜರಾಗಿದ್ದರೆ, ಬಿ.ಆರ್.ಪಾಟೀಲ್ ಗೈರಾಗಿದ್ದರು. ಇಬ್ಬರೂ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರಿಂದ ಸರ್ಕಾರದ ಬಗ್ಗೆ ಶಾಸಕರ ಅಸಮಾಧಾನ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಸರಣಿ ಸಭೆ ನಡೆಸಿ ಶಾಸಕರು, ಸಚಿವರೊಂದಿಗೆ ಸಭೆ ನಡೆಸಿದ್ದರು.
‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಾನು ಬಾಯ್ಬಿಟ್ಟರೆ ಸರ್ಕಾರ ಅಲುಗಾಡುತ್ತದೆ’ ಎಂದಿದ್ದ ಬಿ.ಆರ್. ಪಾಟೀಲ್ ಪ್ರವಾಸದ ಕಾರಣ ನೀಡಿ ಗೈರಾಗಿದ್ದರು. ಇನ್ನು ‘ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಾನು ರಾಜೀನಾಮೆ ನೀಡಿದರೂ ಅಚ್ಚರಿಯಿಲ್ಲ ಎಂದಿದ್ದ ರಾಜುಕಾಗೆ ಅವರು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು. ಸತೀಶ್ ಜಾರಕಿಹೊಳಿ ಉಪಸ್ಥಿತಿಯಲ್ಲಿ ತಮ್ಮ ಕ್ಷೇತ್ರದ ನೀರಾವರಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಈ ಪೈಕಿ ಕೆಲ ಬಗೆಹರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.-ಬಾಕ್ಸ್-
ನೀವೂ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ: ಮನವಿ
ಹಿಂದಿನ ಬಿಜೆಪಿ ಸರ್ಕಾರ ₹2,70,695 ಕೋಟಿ ಕಾಮಗಾರಿ ತೆಗೆದುಕೊಂಡು ಅನುದಾನ ಒದಗಿಸದೆ ಟೆಂಡರ್ ಕರೆದಿದ್ದರು. ₹1,66,426 ಕೋಟಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ತೆಗೆದುಕೊಂಡು ₹72,000 ಕೋಟಿಗೂ ಹೆಚ್ಚು ಬಿಲ್ ಬಾಕಿ ಉಳಿಸಿದ್ದರು. ಕೇಂದ್ರವು 15ನೇ ಹಣಕಾಸು ಆಯೋಗ ವರದಿಯಲ್ಲಿನ ಅನ್ಯಾಯದಿಂದ 5 ವರ್ಷಗಳಲ್ಲಿ ₹68,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದರ ನಡುವೆಯೇ ವರ್ಷಕ್ಕೆ ₹52,000 ಕೋಟಿ ಗ್ಯಾರಂಟಿಗೆ ಖರ್ಚು ಮಾಡುತ್ತಿದ್ದೇವೆ. ಈ ವರ್ಷ ₹1,24,440 ಕೋಟಿ ವೇತನ, ಪಿಂಚಣಿಗೆ ವಿನಿಯೋಗಿಸುತ್ತಿದ್ದೇವೆ. ಇದರ ನಡುವೆಯೂ ಬಂಡವಾಳ ವೆಚ್ಚ ₹83,200 ಕೋಟಿ ಖರ್ಚು ಮಾಡಿದ್ದೇವೆ. ಇದೆಲ್ಲವನ್ನೂ ನೀವೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜುಕಾಗೆ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ: ಸತೀಶ್
ರಾಜು ಕಾಗೆ ಅವರಿಗೆ ನೀರಾವರಿ ಯೋಜನೆ ಬಗ್ಗೆ ಅಸಮಾಧಾನ ಇದೆ. ಅವರ ಕ್ಷೇತ್ರದ ಸಮಸ್ಯೆಗಳ ಪೈಕಿ ಕೆಲವುಗಳಿಗೆ ಮುಖ್ಯಮಂತ್ರಿಗಳು ತಕ್ಷಣ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಸಭೆ ನಮಗೆ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆ. ರಾಜುಕಾಗೆ ಸೇರಿ ಎಲ್ಲರೊಂದಿಗೂ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಎಲ್ಲರೂ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ವಿವೇಚಾನಾ ಕೋಟಾದಡಿ 50 ಕೋಟಿ ರು. ನೀಡಿದ್ದಾರೆ. ನಮ್ಮ ನಮ್ಮ ಇಲಾಖೆಗಳಿಂದ ಬೇರೆ ಹಣ ನೀಡುತ್ತೇವೆ. ಮುಖ್ಯಮಂತ್ರಿಗಳು ನೀಡಿರುವುದು ಬೋನಸ್ ಎಂದು ಹೇಳಿದರು.
ವಿರೋಧಪಕ್ಷಗಳು ಅಧಿವೇಶನದಲ್ಲಿ ಚರ್ಚಿಸಲಿ: ಸಚಿವ ಈಶ್ವರ್ ಖಂಡ್ರೆ
ಮುಖ್ಯಮಂತ್ರಿಗಳ ಸಭೆಗೆ ವಿರೋಧಪಕ್ಷಗಳ ಶಾಸಕರನ್ನು ಕರೆದಿಲ್ಲ ಎಂಬುದು ಪ್ರತಿಪಕ್ಷಗಳ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ. ಅವರು ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲಿ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಮುಖ್ಯಮಂತ್ರಿಗಳ ಸಭೆಯಲ್ಲಿ ನಮ್ಮ ಜಿಲ್ಲೆಯ ಸಮಸ್ಯೆ ಹಾಗೂ ಬೇಡಿಕೆಗಳನ್ನು ಹೇಳಿಕೊಂಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಹಕಾರ ಕೋರಿದ್ದೇವೆ. ಎಲ್ಲರಿಗೂ ಅನುದಾನ ನೀಡುತ್ತಾರೆ. ವಿರೋಧ ಪಕ್ಷದವರು ಹೊಟ್ಟೆಕಿಚ್ಚಿನಿಂದ ಮಾತಾಡುವುದು ಬೇಡ ಎಂದರು.
ಗ್ಯಾರಂಟಿ ಸಾಧನೆ ಜನರಿಗೆ ತಲುಪಿಸಿ
ಈ ವೇಳೆ, ‘ರಾಜ್ಯದ ಜನರ ತಲಾ ಆದಾಯ ಇಡೀ ದೇಶದಲ್ಲಿ ನಂಬರ್ ಒನ್ ಆಗಿದೆ. ಇದನ್ನು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಈ ಸಾಧನೆಗೆ ಐದು ಗ್ಯಾರಂಟಿಗಳು ನೇರ ಕಾರಣ ಎಂದು ಕ್ಷೇತ್ರದ ಮತದಾರರಿಗೆ ಅರ್ಥ ಮಾಡಿಸಬೇಕು. ಜತೆಗೆ ಯೂರಿಯಾ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ. ಮುಂಗಾರು ಹಂಗಾಮಿಗೆ ಏಪ್ರಿಲ್ ನಿಂದ ಜುಲೈ ವರೆಗೆ 6.81 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದು 5.17 ಲಕ್ಷ ಮೆಟ್ರಿಕ್ ಟನ್. ಕೇಂದ್ರವು ಯೂರಿಯಾ ಪೂರೈಸದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಆದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಹಾಗೂ ನಾಚಿಕೆಗೇಡಿತನದ ಕ್ರಮ. ಇದನ್ನು ನೀವುಗಳು ಕ್ಷೇತ್ರದ ಜನತೆಗೆ ಅರ್ಥ ಮಾಡಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು ಎನ್ನಲಾಗಿದೆ.
ಅಧಿಕಾರಿಗಳನ್ನು ಚುರುಕುಗೊಳಿಸಿ:
ಎಲ್ಲಾ ಕೆಡಿಪಿ ಸಭೆಗಳಲ್ಲೂ ಶಾಸಕರು, ಸಚಿವರು ಪಾಲ್ಗೊಳ್ಳಬೇಕು. ಜನರ ಸಮಸ್ಯೆಗಳ ಬಗ್ಗೆ, ಕಾಮಗಾರಿಗೆ ಇರುವ ತಾಂತ್ರಿಕ ತೊಂದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬಧೋರಣೆ ಬಗ್ಗೆ ಕೆಡಿಪಿ ಸಭೆಗಳಲ್ಲೇ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಸ್ಥಿತಿ ಗತಿ, ಕೃಷಿ ಚಟುವಟಿಕೆಗಳು ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಹಣದ ಪ್ರಮಾಣ, ಕಾಮಗಾರಿ ಪೂರ್ಣಗೊಳಿಸಲು ಕಾಲಾವಧಿ ನಿಗದಿ ಮಾಡಿ ಅಧಿಕಾರಿಗಳನ್ನು ಚುರುಕುಗೊಳಿಸಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.